Friday, 28 December 2012

ಸಾವು ನ್ಯಾಯವೇ?


ಕಣ್ಣು ಮುಚ್ಚಿದಳು ಹುಡುಗಿ
ಕಾಮಾಂಧರ ತೀಟೆಗೆ ಬಲಿಪಶುವಾಗಿ ..
ಕಣ್ಣು ಬಿಚ್ಚಲಿ ನ್ಯಾಯದೇವತೆಯು..
ಕೊಡುವ ಶಿಕ್ಷೆಗೆ
ಬೆಚ್ಚಿ ಬೀಳಲಿ ಕಿರಾತಕರು...
ಸಿಗಲಿ ನ್ಯಾಯವು ... ಸಾವಿಗೆ...
ಪಾಠವಾಗಲಿ ಪಾಪಿಗಳಿಗೆ...

Thursday, 27 December 2012

ಸುಳ್ಳು- ನಿಜ


ಬದುಕಿನ ಪಯಣದಲಿ
ಸುಖ-ದುಃಖಗಳ ಕೊಳ್ಳುವೆವು
ನಮ್ಮೆಯ ಹಣೆಯ ಬರಹದಂತೆ
ಭವಿಷ್ಯವ ನಿರ್ಧರಿಸುವ
ನಿಲ್ಲದ ವ್ಯಾಪಾರವಿದು
ಸುಳ್ಳು-ನಿಜಗಳ ಸಂತೆಯೊಳಗೆ!!!

ನಿದ್ರೆ


ವಾಸ್ತವದಿಂದ
ದೂರವಾಗಿ
ಸ್ವಪ್ನ ಲೋಕದಲ್ಲಿ
ವಿಹರಿಸುವ
ರಹದಾರಿ

Thursday, 20 December 2012

ಕಾಮಾಂಧರು

ಅರಳುವ ಮುನ್ನ
---------------
ಹೊಸಕಿದೆ ಮೊಗ್ಗನು
ಅರಳುವ ಮುನ್ನ
ರಕ್ಕಸ ವರ್ತನೆ ಸರಿಯೇನು?

ಮಾನವೀಯತೆ ಮರೆತು
ಕ್ರೌರ್ಯವ ಮೆರೆದ
ಕಾಮಾಂಧರಿಗೆ
ಬದುಕುವ ಹಕ್ಕು ಇದೆಯೇನು?

ಪ್ರಳಯ ಆಗಲಿಲ್ಲವೆಂಬ ಬೇಸರದಲ್ಲಿ....

ಚಿಂತೆ
--------------
ಪ್ರಳಯ ಆಗುವುದೆಂಬ ಭೀತಿಯಲಿ
ದಿನದೂಡಿದ ಜನರಿಗೆ
ಈಗ ಪ್ರಳಯ ಏಕೆ ಆಗಲಿಲ್ಲವೆಂಬ
ಚಿಂತೆ ಕಾಡದೊಡಗಿದೆ

Tuesday, 18 December 2012

ಯೌವ್ವನ


ಯೌವ್ವನ
ಇಂದಿದ್ದು
ನಾಳೆ ಅಳಿಯುವ
ಬಣ್ಣ
ಅದಕ್ಕೇಕೆ
ನೀ
ಲಕ್ಷ್ಯ ಕೊಡುವೆ
ಅಣ್ಣ

Sunday, 16 December 2012

ಸಾಧನೆ

ಸಾಧನೆ
--------
ದಿನವೂ ತಿಂದುಂಡು
ವ್ಯೆರ್ಥ ಕಾಲಕಳೆದು
ಬದುಕಿದ್ದು ಸತ್ತಂತಿರುವ
ನಾವು ಸಾಧಿಸಿದ್ದಾದರೂ ಏನು?

ಕಣ್ಣ ಮುಂದೆ ತಪ್ಪು ನಡೆದು
ಅನ್ಯಾಯ- ಅಕ್ರಮ-ಅನೀತಿ ಕಂಡು
ಬೆಪ್ಪರಂತೆ ಸುಮ್ಮನಿರುವ
ನಾವು ಸಾಧಿಸಿದ್ದಾದರೂ ಏನು?

ದೇಶವನ್ನೇ ಕೊಳ್ಳೆಹೊಡೆದು
ಭ್ರಷ್ಟತೆಯನ್ನು ಅಪ್ಪಿ ಮೆರೆವವರಿಗೆ
ಜೈಕಾರ ಹಾಕಿ ಬೆಂಬಲಿಸುವ
ನಾವು ಸಾಧಿಸಿದ್ದಾದರೂ ಏನು?

ಸ್ವಾರ್ಥ ತೊರೆದು
ದೇಶ ಪ್ರೇಮ ಮೆರೆದು
ಮನುಷ್ಯತ್ವವೇ ಧರ್ಮವೆನೆಸೆ
ಅದುವೇ ಸಾಧನೆ.. ಅಲ್ಲವೇನು...?




Friday, 14 December 2012

ಮಾತು ಕೊಟ್ಟವಳು.. ಕೈಕೊಟ್ಟಾಗ...

ವಚನ
------
ಕೊನೆವರೆಗೂ
ಜೊತೆಯಲ್ಲಿರುತ್ತೇನೆಂದು
ವಚನವಿತ್ತವಳು
ಉಳಿದಿದ್ದು...
ನೆನಪಿನಲ್ಲಿ ಮಾತ್ರ..!!!

Thursday, 13 December 2012

ಕವನ

------
ಮನದ  ಭಾವಗಳಿಗೆ
ಅಕ್ಷರಗಳ ಪೋಣಿಸಿ ಕಟ್ಟಿದ ಮಾಲೆ

ನಲಿವಿನ ನಗುವಾಗಿ
ಅಳುವಿನ ಕಣ್ಣೀರಾಗಿ
ದುಗುಡ, ದುಮ್ಮಾನಗಳಿಗೆ ಧ್ವನಿಯಾಗಿ
ಹೊರಹೊಮ್ಮಿದ ಭಾವಸ್ಪುರಣ

ಒಲವಿನ ಓಲೆ

ಪ್ರೀತಿಯೇ ತುಂಬಿದ ಪದಗಳಲ್ಲಿ
ನಲ್ಮೆಯ ವಾಕ್ಯಗಳ ರಚಿಸಿ
ಹೃದಯ ನಿವೇದಿಸಿದ  ಪ್ರೇಮದ ಮಾತು

Wednesday, 12 December 2012

ಅಂತೂ ಸುನೀತ ಅಕ್ಕನ ನೆರವಿನಿಂದ ನನ್ನ ಬ್ಲಾಗ್ ಪ್ರಾರಂಭ ಆಯ್ತು..

ಗೆಳೆಯರೇ ನಿಮಗಿದೋ... ಪ್ರೀತಿ ಸ್ವಾಗತ...


ಬಹಳ ದಿನಗಳಿಂದ ನನ್ನದೇ ಒಂದು ಬ್ಲಾಗ್ ಇದ್ದರೆ ಎಷ್ಟು ಚಂದ ಅನಿಸುತ್ತಿತ್ತು.. ಫೇಸ್ ಬುಕ್ ಗೆಳೆಯರನೇಕರು ಈ ಬಗ್ಗೆ ವಿಚಾರಿಸಿದ್ದರು, ಬ್ಲಾಗ್ ಮಾಡುವಂತೆ ಸಲಹೆಯನ್ನೂ ಇತ್ತಿದ್ದರು,, ಬಿಡುವಾದಾಗ ಗೀಚುವ ಸಾಲುಗಳಿಗೆ (ಕವನ ಅಂದುಕೊಳ್ಳಬಹುದು) ಮೆಚ್ಚುಗೆಯ ಮಾತುಗಳು ಕೇಳಿದಾಗ, ಅವುಗಳೆಲ್ಲವನ್ನು ಒಂದು ಕಡೆಯೇ ಶೇಖರಿಸಿಡುವುದು ಉತ್ತಮ ಎಂಬ ಅನಿಸಿಕೆ ನನಗೂ ಒಪ್ಪಿಗೆಯಾಗಿತ್ತು.. ಆದರೆ ತಾಂತ್ರಿಕವಾಗಿ ನಾನು ದಡ್ಡ, ಬ್ಲಾಗ್ ಶುರುಮಾಡುವುದು ಹೇಗೆ ಎಂದೇ ಗೊತ್ತಿರಲಿಲ್ಲ.. ಪ್ರಯತ್ನಿಸಿದ್ದೆ , ಆದರೆ ಸಫಲತೆ ಕಂಡಿರಲಿಲ್ಲ. ಒಂದು ದಿನ ನನ್ನ ಅಕ್ಕ ಸುನಿತಾ ಅಕ್ಕ ಕೂಡ, ಬ್ಲಾಗ್ ಮಾಡು ಎನ್ನುವ ಸಲಹೆ ಕೊಟ್ಟರು, ಅವರಿಗೆ ನನ್ನ ಪರಿಸ್ಥಿತಿ ವಿವರಿಸಿದೆ. ಅವರು ನನಗಾಗಿ ಈ ಬ್ಲಾಗ್ ಮಾಡಿಕೊಟ್ಟರು. ಅವರಿಗೆ ನಾನು ಚಿರಖುಣಿ... Thank you Sunitha Akka... :)  ನನ್ನ ಕವನಗಳೆಂಬ .. ಗೀಚುವಿಕೆಯನ್ನು ಓದಿ.. ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸಿ...

- ನಿಮ್ಮವ

ಬಿ.ಎ.ಅಶೋಕ

ಮೌನದ ಮಾತು
----------------
ಮೌನವೇ ಮಾತಾದಾಗ
ಮಾತು ಮೂಕವಾಯಿತು
ಕಣ್ಣೋಟವೇ ಮಾತಾಯಿತು
ಕಿರುನಗೆ ಎಲ್ಲಾ ಹೇಳಿತು
ಹೃದಯದ ಪಿಸುದನಿಯ .. ಹೃದಯ ಕೇಳಿತು..
ನನ್ನ.. ನಿನ್ನ ಬಳಿ ಸೆಳೆಯಿತು
ನೋವು-ನಲಿವು
--------------
ನೋವು.. ನಲಿವು.. ಬಾಳಿನ ಪುಟಗಳು
ಬದಲಾಗಲು ಕಾಯಬೇಕು ಕೆಲವು ಕ್ಷಣಗಳು
ಹಂಚಿದಷ್ಟು ಹೆಚ್ಚುವ ನಲಿವು
ತೋಡಿಕೊಂಡರೇ ಕಳೆಯುವ ನೋವು
ಹಗಲು-ರಾತ್ರಿ ಒಂದರ ಹಿಂದೊಂದು
ಸುಖ-ದುಃಖ ಒಂದರ ಬಗಲೊಂದು
ನಗುವು-ಅಳುವು.. ಶಾಶ್ವತವಲ್ಲ
ಎಲ್ಲ ಪ್ರಶ್ನೆಗಳಿಗೂ ತಕ್ಷಣವೇ ಉತ್ತರ ಸಿಗೋಲ್ಲ
ಪರಿಹರಿಸಲಾಗದ ಸಮಸ್ಯೆಯೇ ಇಲ್ಲ
ಕಾಯುವ ತಾಳ್ಮೆಯು ಎಲ್ಲರಲ್ಲಿ ಏಕಿಲ್ಲ..?
ವಿದೇಶಿ
-------
ಪೆಪ್ಸಿ.. ಕೋಲ.. ಸೆಂಟು.
ಎಲ್ಲವೂ ವಿದೇಶದ್ದೇ ನಂಟು
ರಾಗಿ.. ಜೋಳ.. ಗೋದಿ
ದೂರವೇ ಉಳಿದಿದೆ ನೋಡಿ
ಕಾರ್ನ್ ಫ್ಲೇಕ್ಸ್..ಪೀಜಾ.. ಬರ್ಗರ್.. ಮಾಡುತಿದೆ ಮೋಡಿ..
ನಮ್ಮೂರಿನ ಜನಕ್ಕೆ ಎಲ್ಲವೂ ವಿದೇಶಿಯೇ ಬೇಕು
ಕಸದ ಸುದ್ದಿ ಅಲ್ಲಿ ಬಂದ ಬಳಿಕವಾದರೂ ಎಚ್ಚೆತ್ತು ಕೊಳ್ಳಬೇಕು !!!
ಪ್ರೇಮ ಪತ್ರ
------------
ಜೇನಿನಲ್ಲಿ ಅದ್ದಿ ತೆಗೆದ ಹೃದಯದ ಮಾತುಗಳನ್ನು
ಮನದ ಕಡಲಿನಲ್ಲಿ ಹೆಕ್ಕಿದ ಸಿಹಿ ಮುತ್ತುಗಳನ್ನು
ಅಂದದಲಿ ಪೋಣಿಸಿದ ಭಾವಗಳ ಮಾಲೆಯನು
ಪ್ರೇಮದೇವತೆಗೆ ಅರ್ಪಿಸಿದ ಅಕ್ಷರಗಳ ಪೂಜೆ...
ತಾಳ್ಮೆ.
-------
ತಾಳ್ಮೆ ಇರಲಿ
ಆಯ್ಕೆಯಲಿ..
ಮದುವೆಯಾಗುವಾಗ !
ಮೊಬೈಲು ಕೊಳ್ಳುವಾಗ !
ತಾಳ್ಮೆಯ ಫಲವದು ಸಿಹಿಯು..
ಆತುರತೆಯದು ಕಹಿಯು..
ಓಡಬೇಡ ನೀ ನಿಲ್ಲು...
ಸಿಗಬಹುದು ಹೊಸ ಮಾಡಲ್ಲು...
ನಟ
----
ತಾನಲ್ಲದ ಪಾತ್ರಗಳಲ್ಲಿ ತಾನಾಗಿ
ತನ್ನವರಲ್ಲದ ಮಂದಿಯಲಿ ಒಂದಾಗಿ
ಮನದ ಭಾವಗಳ ..ಕೈಗೂಸಾಗಿ...
ನಗುವಲ್ಲಿ ನಗುವಾಗಿ.. ಅಳುವಲ್ಲಿ ಅಳುವಾಗಿ
ಬಣ್ಣದ ಬದುಕ ನೆಚ್ಚಿರುವ ಭೈರಾಗಿ..
ಅವಕಾಶ
--------
ಅವಕಾಶಗಳ ಹುಡುಕಾಟ ನಿರಂತರ
ಅದುವೆ ಸೋಲು-ಗೆಲುವಿನ ಅಂತರ
ಸಿಗುವವರೆಗೂ ಇರಲಿ..ಕಾತರ
ಅದಕ್ಕೆ ಬೇಕು ಅದೃಷ್ಟದ ಮಮಕಾರ
ಜೊತೆಗಿರಬೇಕು ಗೆಳೆಯರ ಸಹಕಾರ
ಸ್ವ-ಪ್ರಯತ್ನದಲ್ಲೇ ಧಕ್ಕಿಸಿಕೊಳ್ಳುವ ಛಲಗಾರ
ಆಗಲಿ ಎಲ್ಲರ ಕನಸುಗಳು ಸಾಕಾರ
ನೇತ್ರದಾನ
----------
ಇದ್ದರೆ ನೇತ್ರದಾನದ ಮತಿ
ಎಲ್ಲರಿಗೂ ಸಿಗುವುದು ಸದ್ಗತಿ
ಮಣ್ಣಲ್ಲಿ ಮಣ್ಣಾಗುವ ಬದಲು
ಕಳೆಯಿರಿ ಅಂಧರ ಕತ್ತಲು
ಬದುಕಿದ್ದು ಸಾಯುವ ಮಂದಿಯ ಮುಂದೆ
ಸತ್ತು ಬದುಕುವ ದಾರಿ ಇದೊಂದೆ
ನೀನಾರಿಗಾದೆಯೋ ಎಂದು ಕೇಳುವ ಮುನ್ನ
ನೀವು ಮಾಡಿದರೆ ನೇತ್ರದಾನ.. ಚೆನ್ನ
ಮಳೆ
-----
ಮಳೆಗಾಗಿ ಕಾದಿರುವ... ಇಳೆ
ಕಳೆಗುಂದಿರುವ ಇಳೆಯ ತುಂಬೆಲ್ಲಾ... 'ಕಳೆ'
ಮಳೆಯಿಲ್ಲದೆ ಬರಲಾರದು.. 'ಬೆಳೆ'
ಬೆಳೆಯಿಲ್ಲದೆ ರೈತರ ಮೊಗದಲ್ಲಿ ಕಾಣಲಾರದು ನಗುವಿನ.. ಸೆಳೆ
ಸಾಲದ ಶೂಲಕೆ ಸಿಲುಕಿವೆ ರೈತನ ಮಡದಿಯ ಕೈ.. ಬಳೆ
ಸಿರಿವಂತರಿಗೆ ಮಾತ್ರ ಆಗಲಾರದು ಕೈ.. ಕೊಳೆ
ಪ್ರಳಯ
-------
ಉರಿ ಬಿಸಿಲು ನೆತ್ತಿಯ ಮೇಲೆ
ನೆಲ ಸುಡುವ ಕೆಂಡ
ಒಡಲೊಳಗೆ ಕುದಿವ ರಕುತ
ಕಿಡಿಕಾರುವ ಕಣ್ಣುಗಳು
ದ್ವೇಷದ ಜ್ವಾಲಾಗ್ನಿ
ಎಲ್ಲೆಲ್ಲೂ ಹಗೆಯ ಹೊಗೆ
ಶಾಂತಿ ಮಂತ್ರಕೆ ಜನ ಕಿವುಡು
ಪ್ರಳಯದ ರೌದ್ರ ನರ್ತನಕೆ
ಮುನ್ಸೂಚನೆಯ ಮಹಾಮೌನ
ಅಂತಿಮ ಪಯಣವಿದು
ಉಳಿಗಾಲವೆಲ್ಲಿಹುದು ???
ಸುಖ
------
ಒಬ್ಬೊಬ್ಬರಿಗೆ ಒಂದೊಂದರಲ್ಲಿ ಸುಖ
ಅಳುವ ಕಂದನಿಗೆ ತಾಯಿ ಮಡಿಲು ನೀಡುವುದು ಸುಖ
ಸಖನಿಗೆ ಸಖಿಯ ತೊಳ್ತೆಕ್ಕೆಯಲಿ ಸುಖ
ಹಸಿದವನಿಗೆ ಹಿಡಿ ಅನ್ನದಲಿ ಸುಖ
ಬಾಯಾರಿದವನಿಗೆ ಗುಟುಕು ನೀರಿನಲಿ ಸುಖ
ದಣಿದವನಿಗೆ ಕಣ್ತುಂಬ ಬರುವ ನಿದ್ರೆಯಲಿ ಸುಖ
ಲೋಭಿಗೆ ಕೂಡಿಟ್ಟ ಹೊನ್ನು ಹೆಚ್ಚುತ್ತಿರೆ ಸುಖ
ದಾನಿಗೆ ಎಲ್ಲವನೂ ಕೊಡುವುದರಲ್ಲೇ ಸುಖ
ಸುಖಗಳಿಗಿಲ್ಲಿ ಹತ್ತು ಹಲವು ಮುಖ
ಆದರೆಲ್ಲಾ ಸುಖಗಳು ಕ್ಷಣಿಕ....
ಕಾವೇರಿ
--------
ತಮಿಳಿನವರಿಗೂ ಬೇಕಂತೆ ಕಾವೇರಿ...
ಅದಕ್ಕೆ ಎಲ್ಲೆಲ್ಲೂ ನಡೆಯುತ್ತಿದೆ ಪ್ರತಿಭಟನೆ.. ಕಾವ್- ಏರಿ !!!
ಇದಕ್ಕೆಲ್ಲಾ ಕಾರಣ ಆ ಜಯಲಲಿತ.. ಮಹಾ ಮಾರಿ
ಅದಕ್ಕೆ ಆಕೆ ಇನ್ನೂ ಕುವರಿ !!!
ಸಭೆಯಿಂದ ಹೊರನಡೆದ ಶೆಟ್ರು ಮಾಡಿದ್ದೆ ಸರಿ
ನೀರು ಬಿಟ್ಟು ಅವರಾಗಲಾರರು ಪರೋಪಕಾರಿ-ಮನೆಗೆ ಮಾರಿ !!!
ಕವಿ(ನ)ಮನ
------------
ಮನದ ಭಾವ ಕವಿತೆಯಾಗಿ ಹೊಮ್ಮಿದರೆ ಸಾಕೆ
ಬೆನ್ನು ತಟ್ಟಿ.. ತಪ್ಪ ತಿದ್ದಿ..ಮಾರ್ಗತೋರ ಬೇಕೆ
ಕವಿಗೆ ಬೇಕು ಸ್ಪಂದನ..
ಹೊಮ್ಮಲು ಚಿಂತನೆ ಚಿರಂತನ..
ಮೆಚ್ಚುಗೆ.. ಪ್ರೋತ್ಸಾಹಗಳೇ ಅವನ ರಚನೆಗೆ ಹೂರಣ
ಮತ್ತೆ.. ಮತ್ತೆ .. ಬರೆಯಲು ಅದೂ ಆಗಬೇಕು ಕಾರಣ
ಮರೆವು
-------

ಮನವ ಕೆದಕಿ..ಹೃದಯ ಬಗೆದು
ನೋವುಕೊಡುವ.. ನೆನಪುಗಳಿಗಿಂತ
ಎಲ್ಲ ಮರೆಸಿ.. ನೆಮ್ಮದಿ ತರುವ
ಮರೆವು ಒಂದು ವರವು
ಮುಸ್ಸಂಜೆಯ ಹೆಜ್ಜೆಗಳು
-----------------------
ಮಾಗಿದ ದೇಹದ ... ಮುಗಿಯದ ಪಯಣ
ಅಂತಕನೂರಿಗೆ ಹೋಗುವ ತವಕ
ಚೀಲದಿ ತುಂಬಿದೆ ನೆನಪಿನ ಬುತ್ತಿ
ಮನಸಿನ ಗಾಯದ ತಡೆಯದ ನೋವು
ನಡಿಗೆಗೆ ಇರುವುದು ಬರೀ ಕೋಲೇ ಆಸರೆ
ಕರುಣೆಗೆ ಸಾಕು ಸಾವಿನ ಕರೆಯೊಂದೇ
ನಗು-ನಗು-ನಗು
---------------
ಅಳುವಿನ ಪ್ರಶ್ನೆಗೆ... ನಗುವೇ ಉತ್ತರ
ನೋವಿನ ಮನಕೆ... ನಗುವೇ ಸಾಂತ್ವನ
ಕಹಿ ನೆನೆಪಿಗೆ... ನಗುವೇ ಮರೆವು
ಆರದ ಗಾಯಕೆ... ನಗುವೇ ಔಷಧ
ದ್ವೇಷದ ಧಮನಕೆ.. ನಗುವೇ ಸ್ನೇಹ
ಚಿಂತೆಯ ದೂರಕೆ... ನಗುವೇ ದಾರಿ
ಪ್ರೀತಿಗೂ.. ಸ್ನೇಹಕೂ.. ನಗುವೇ ಬೇಕು
ಬಾಳಿನ ಬಾಂಧವ್ಯದ.. ಬಾಡದ ಚಿಲುಮೆ.. ನಗುವೆ ನಮಗೆ ವರವು
ಮಾತೃ ಭಾಷೆ
------------
ತನು ಕನ್ನಡ.. ಮನಕನ್ನಡ...ಜಯ ಕನ್ನಡವೆನ್ನಿ
ಶ್ರೀಗಂಧದ ನಾಡಿಗೆ.. ಹೊನ್ನಿನ ಬೀಡಿಗೆ ಕೀರುತಿ ತನ್ನಿ
ಮಾತೃ ಭಾಷೆಯಿದು ಮನಸಿನ ಭಾಷೆ....
ಪ್ರಾಥಮಿಕ ಶಿಕ್ಷಣ ಇದರಲ್ಲೇ ಇರಲೆಂಬ ಮನೋಭಿಲಾಷೆ..
ಇದರಿಂದಲಾಗಲಿ ಭಾಷೆಯೊಂದಿಗೆ ನಮ್ಮೆಯ ಏಳ್ಗೆ
ಮೊಳಗಲಿ ಎಲ್ಲೆಡೆ 'ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಬಾಳ್ಗೆ '
ಆಸೆಯಕುದುರೆ
------------
ಆಸೆಯ ಕುದುರೆ ನಾಗಾಲೋಟದಿ ಓಡಿತ್ತು
ಹಿಡಿಯುವರಿಲ್ಲ.. ಬಡಿಯುವರಿಲ್ಲ
ಜೀನದು ಮೊದಲೇ ಇಲ್ಲ
ಓಡಿದ ದಾರಿ.. ತಿಳಿಯದು ಕೇಳಿ
ಬೆಟ್ಟ ಗುಡ್ಡಗಳ ಹತ್ತೋಡಿ
ಮುಗಿಯದು ಪಯಣ
ನಿಲ್ಲದ ಕದನ
ಹಿಡಿದವ ಗೆದ್ದ..
ಸಿಗದವ ನಿಟ್ಟುಸಿರನೇ ಬಿಟ್ಟ
ಋಣ
-----
ಹೆಗಲ ಮೇಲಿರುವ ಋಣದ ಮೂಟೆಯ ಇಳಿಸುನೆಂತು
ನವಮಾಸಗಳು ಹೊತ್ತು.. ಹೆತ್ತ.. ತಾಯ ಋಣ ತೀರುಸುವೆನೆಂತು
ತನ್ಹೆಗಲ ಮೇಲೆ ಹೊತ್ತು.. ಕೈತುತ್ತನಿತ್ತ ...ತಂದೆಯ ಋಣ ತೀರುಸುವೆನೆಂತು
ಅಕ್ಷರವ ತಿದ್ದಿ-ತೀಡಿ..ವಿದ್ಯೆಯ ಕಲಿಸಿದ .. ಗುರುವಿನ ಋಣ ತೀರುಸುವೆನೆಂತು
ಆಶ್ರಯವಿತ್ತು ಜೀವನ ನೀಡಿದ...ಈ ಮಣ್ಣಿನ ಋಣವ ತೀರುಸುವೆನೆಂತು
ಸ್ನೇಹದಲಿ ಸಂತಸದ ಹೊನಲ ಹರಿಸಿದ.. ಮಿತ್ರನ ಋಣ ತೀರುಸುವೆನೆಂತು
ಕಷ್ಟ-ಸುಖದಲ್ಲಿ ಕೈಜೋಡಿಸಿದ... ಪತ್ನಿಯ ಋಣ ತೀರುಸುವೆನೆಂತು
ಅಕ್ಕರೆಯ ಸೊಂಪಿನಲಿ ಬದುಕು ರೂಪಿಸ
ಿದ... ಅಣ್ಣನ ಋಣ ತೀರುಸುವೆನೆಂತು
ಏಳಿಗೆಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ... ಬಂಧು-ಬಾಂಧವರ ಋಣ ತೀರುಸುವೆನೆಂತು
ಎಲ್ಲರ ಚರಣಕೆ ವಂದಿಪುದಲ್ಲದೆ.. ಋಣವನು ತೀರಿಸಲಾದೀತೆ..
ಪ್ರಳಯ
-------
ಪಾಪದ ಕೊಡ ತುಂಬಿರಲು
ಪ್ರಕೃತಿಯು ಮುನಿಯಲು
ಅದುವೇ ಪ್ರಳಯ..
ಸ್ವಾರ್ಥ.. ದ್ರೋಹ.. ದ್ವೇಷ..ಮೋಹ.. ಹೆಚ್ಚಿರಲು
ತನ್ನ ಒಡಲ ಬಗೆದು.. ತಿಂದುಂಡವರ
ಏಕಾಪೋಷಣ ತೆಗೆದುಕೊಳ್ಳದೇ ಬಿಡಳವಳು...
ಭೂಕಂಪ.. ಸುನಾಮಿ.. ಎಬ್ಬಿಸಿ.. ಅಲ್ಲೋಲ-ಕಲ್ಲೋಲವನೆ ಸೃಷ್ಟಿಸುವಳು..
ಬದುಕುಳಿದವರ ಜೀವನದ ಹೋರಾಟವದು..
ಹೋರಾಡದೇ ದಾರಿ ಎಲ್ಲಿಹುದು..
ಹಿಡಿ ಅನ್ನಕ್ಕಾಗಿ ಕಾದಾಟ.. ಬಡಿದಾಟ
ಶಕ್ತಿ ಇದ್ದವ ಉಳಿದು.. ನಿಶಕ್ತರ ಅಳಿಸುವ ಕೊನೆಯ ಆಟ
ಖಿನ್ನತೆ
-------
ಖಾಲಿ ಹೃದಯದ ರೋದನ
ಮನದಲಿ ಭಾವಗಳ ಹೋಯ್ದಾಟ
ನಿಸ್ತೇಜ ಕಣ್ಣುಗಳ ಶೂನ್ಯ ದೃಷ್ಟಿ
ನಗುವಿನ ಹುಡುಕಾಟದ ಜೋಲು ಮೋರೆ
ಒಂಟಿತನವೇ ಆಪ್ತವಿಲ್ಲಿ
ಹೊರಬರಲು ದಾರಿಯೆಲ್ಲಿ ?
ಸ್ನೇಹಿತರೇ, ಮೊದಲಬಾರಿಗೆ ಗದ್ಯ/ಹಾಸ್ಯಲೇಖನ/ಪ್ರಸಂಗ (ಏನು ಕರೆಯಬೇಕು ತಿಳಿಯುತ್ತಿಲ್ಲ) ಬರೆದಿದ್ದೇನೆ... ಓದಿ.. ಇಷ್ಟವಾದರೆ (ಇಷ್ಟವಾಗದಿದ್ದರೂ).. ನಿಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ, ಸೂಚನೆಗಳನ್ನು ನೀಡಿ ಎಂಬ ಪ್ರೀತಿಯ ಒತ್ತಾಯದೊಂದಿಗೆ ... ನಿಮ್ಮ ಮುಂದೆ...
---------------------------------------------------
ಜಾಗಿಂಗ್ ಪ್ರಸಂಗ
****************

ಇತ್ತೀಚೆಗೆ ನನ್ನ ಪರಿಚಯದವರನ್ನು ಭೇಟಿಯಾದಾಗ..ಉ/ಕು/ಸಾಂ.. ಮುಗಿದ ಮೇಲೆ.. ನನ್ನನ್ನು ಆಪಾದಮಸ್ತಕವಾಗಿ ಗಮನಿಸಿದ ಅವರು

`ಇದೇನಯ್ಯ... ಹೆಂಡತಿಯ ಆರೈಕೆ ಜೋರಾಗಿ ನಡೆಯುತ್ತಿದೆ ಅನಿಸುತ್ತೆ.. ಒಂದೆರಡು ಸುತ್ತು ದಪ್ಪಗಾಗಿದ್ಯಾ' ಅಂತ ರಾಗ ಎಳೆದಾಗ.. ಅವರ ಗುಂಡಗಿನ ಹೊಟ್ಟೆಕಡೆ ನೋಡಿ ನಾನು ನಕ್ಕೆ.. ಅದಕ್ಕವರು `ನೋಡಯ್ಯ.. ನಾವು ಹೇಗಿದ್ರೂ ನಡೆಯುತ್ತೆ.. ಆದರೆ ನೀನು ತೆರೆಮೇಲೆ ಕಾಣಿಸಿಕೊಳ್ಳೋನು.. ಬಾಡಿ ಮೇಂಟೈನ್ ಮಾಡಬೇಕು' ಅಂದಾಗ, ಇತ್ತೀಚೆಗೆ ಶೂಟಿಂಗ್ ಕಡಿಮೆಯಾಗಿ, ಮನೆಯಲ್ಲಿ ತಿಂದುಂಡಿದ್ದರ ಪರಿಣಾಮ ಇದು ಅಂತ ಅವರಿಗೆ ಮನವರಿಕೆ ಮಾಡಿಕೊಟ್ಟೆ... ಸರಿ.. ಸಣ್ಣಗಾಗೋದು ಹೇಗೆ ಎಂಬ ಬಗ್ಗೆ ಒಂದಿಷ್ಟು ಪುಕ್ಕಟೆ ಸಲಹೆ ಕೊಟ್ರು.. ತಲೆ ಆಡಿಸಿ ಮನೆಗೆ ಬಂದು .. ನನ್ನ ಹೆಂಡತಿಯ ಮುಂದೆ ಯಥಾವತ್ ವರದಿ ಒಪ್ಪಿಸಿದೆ ನೋಡಿ.. ಹಳೇ ರೆಕಾರ್ಡು ಆನ್ ಆಯ್ತು.... ` ನಾನು ಎಷ್ಟು ಬಡಕೊಂಡ್ರು ನೀವೆಲ್ಲಿ ನನ್ನ ಮಾತು ಕೇಳ್ತೀರಿ... ಶಂಖದಿಂದ ಬಂದ್ರೆ ತೀರ್ಥ.. ಬೇರೆಯವರು ಹೇಳಿದ್ರೇನೇ ನಿಮ್ಮ ತಲೆಗೆ ಅರ್ಥ ಆಗೋದು... ಅಮೀರ್ ಖಾನ್, ಶಾರುಖ್, ಶಿವರಾಜ್ ಕುಮಾರ್ ಎಲ್ಲಾ ನಿಮಗಿಂತ ದೊಡ್ಡೋರು, ಹ್ಯಾಗೆ ಬಾಡಿ ಮೆಂಟೈನ್ ಮಾಡಿದ್ದಾರೆ ನೋಡಿ... ' ಹೀಗೆ ಆಲಾಪ ಮುಂದುವರೆದೇ ಇತ್ತು.. ಅಲ್ಲಾ ನಾನು ಅಮೀರ್, ಶಿವರಾಜ್ ಕುಮಾರ್ ಅವರಿಗೆಲ್ಲಾ ಹೋಲಿಕೆ ಮಾಡಿಕೊಂಡ್ರೆ.. ನವಿಲು ನೋಡಿ.. ಕೆಂಭೂತ ಪುಕ್ಕ ತೆರೆದುಕೊಂಡ ಹಾಗೆ ಆಗುತ್ತೆ ಅಂತ ಇವಳ್ಗೆಲ್ಲಿ ಅರ್ಥ ಆಗಬೇಕು... ಸರಿ ನಾನು ಜಾಗಿಂಗ್ ಗೆ ಹೋಗ್ತೀನಿ ಅಂತ ಥೇಟ್ ರಾಜಕಾರಣಿಗಳ ಸ್ಟೈಲ್ ಲ್ಲಿ ಆಶ್ವಾಸನೆ ಕೊಟ್ಟೆ.. ` ಈ ಸಲ ನೀವು ಜಾಗಿಂಗ್ ಗೆ ಹೊಗ್ದೆ ಇದ್ರೆ.. ವಾರ್ಡೋಬ್ ನಲ್ಲಿ ನೀವು ಆಗಲ್ಲ ಅಂತ ಇಟ್ಟಿರೋ ಪ್ಯಾಂಟ್ ಗಳನ್ನೆಲ್ಲಾ .. ಪಾತ್ರೆ ಮಾರೋನ್ಗೋ.. ಇಲ್ಲಾ ಅಂದ್ರೆ ಎದುರು ಮನೆ ವಾಚ್ ಮೆನ್ಗೋ.. ಕೊಟ್ಬೀತೀನಿ' ಅನ್ನೋ ಬ್ರಹ್ಮಾಸ್ತ್ರ ಪ್ರಯೋಗ ಮಾಡೇ ಬಿಟ್ಲು... ದುಬಾರಿ ಪ್ಯಾಂಟ್ ಗಳೆಲ್ಲಾ ಮೇಲೇರದೆ ಇತ್ತೀಚೆಗೆ ಮುಷ್ಕರ ಹೂಡಿದ್ದರಿಂದ ವಾರ್ಡೋಬ್ ಸೇರಿದ್ವು.. ಒಂದಲ್ಲಾ ಒಂದಿನ ಮತ್ತೆ ನಾನು ಸಣ್ಣಗೆ ಆಗೇ ಆಗ್ತೀನಿ ಅನ್ನೋ ಭರವಸೆಲಿ ಅವನ್ನೆಲ್ಲಾ ಹಾಗೇ ಇಟ್ಟಿದ್ದೆ.. ಈಗ ಪಾತ್ರಮಾಡೋನ ಪ್ಯಾಂಟ್ಗಳೆಲ್ಲಾ ಪಾತ್ರೆ ಮಾರೋನ ಕೈಗೆ ಹೋಗೋ ಭಯ ಕಾಡೋಕೆ ಶುರುವಾಗಿ.. ಜಾಗಿಂಗ್ ಹೋಗೋದು ಅಂತ ತೀರ್ಮಾನ ಮಾಡೇ ಬಿಟ್ಟೆ.. `ಸರಿ ಮಾರಾಯ್ತಿ.. ನಾಳೆ ಭಾನುವಾರ ರಜಾದಿನ.. ಸೋಮವಾರದಿಂದ ನಾನು ಜಾಗಿಂಗ್ ಹೋಗ್ತೀನಿ' ಅಂದೆ.. `ಭಾನುವಾರ ರಜಾದಿನ ಮಾಡಿದ್ದು ಬ್ರಿಟೀಷ್ನೋರು.. ನಮಗೆಲ್ಲಾ ಭಾನುವಾರವೇ... ವಾರದ ಆರಂಭ..ರವಿವಾರವೇ ಶುಭ' ಅಂತೆಲ್ಲಾ ಭಾಷಣ ಶುರುಮಾಡಿ ಬಿಟ್ಲು.. ನನಗೆ ತಪ್ಪಿಸಿಕೊಳ್ಳೋಕೆ ಇನ್ನು ಯಾವ ಚಾನ್ಸು ಉಳಿಲಿಲ್ಲ... ಒಪ್ಪಿಕೊಂಡು.. ಈ ಮುಂಚೆಯೇ ಇದೇ ಪ್ರಯತ್ನದಲ್ಲಿ ಖರೀದಿಸಿದ್ದ ಜಾಗಿಂಗ್ ಸೂಟ್, ಶೂ.. ತೆಗೆದಿರಿಸಿಕೊಂಡು.. ಅಲಾರಂ.. ಇಟ್ಟು ಮಲಗಿದೆ.
ಬೆಳಗ್ಗೆ ಐದಕ್ಕೆಲ್ಲಾ `ಕರ್ತವ್ಯಂ.. ದೈವಮಾಹ್ನಿಕಂ' ಅಂತ ಅಲಾರಂ ಸುಪ್ರಭಾತ ಹಾಡಿ.. ನನ್ನ ಸವಿನಿದ್ದೆಗೆ, ತಣ್ಣೀರೆರಚಿದಾಗ ವಿಧಿ ಇಲ್ಲದೆ ಎದ್ದೆ.. ಕೊನೆ ಪ್ರಯತ್ನವಾಗಿ ಮೆಲ್ಲಗೆ ` ನಾಳೆ ಇಂದ ಹೋದ್ರೆ ಆಗಲ್ವಾ' ಅಂತ ರಾಗ ಎಳೆದೆ, `ಸರಿ ಬಿಡಿ.. ನಿಮ್ಮ ಪ್ಯಾಂಟ್ಗಳ್ನೆಲ್ಲಾ...' ಅಂತ ಹೆದರಿಸಿದ್ಲು.. `ಬೇಡ.. ನಾನು ಜಾಗಿಂಗ್ ಗೆ ಹೋಗ್ತೀನಿ.. ನೀನು ಮಲಗು' ಅಂತ ಅವಳಿಗೆ ಬೆಚ್ಚಗೆ ಹೊದಿಸಿ.. ನಿತ್ಯಕರ್ಮಗಳನೆಲ್ಲಾ ಮುಗಿಸಿಕೊಂಡು.. ಸಿದ್ಧವಾಗಿ ಹೊರಟೆ.. ` ಬರ್ತಾ ಹಾಗೆ ಹಾಲು ತಗೊಂಡು ಬನ್ನಿ' ಅನ್ನೋ ಸ್ವರ ಕೇಳಿಸ್ತು.. ನನ್ನನ್ನ ಜಾಗಿಂಗ್ ಗೆ ಬಲವಂತ ಪಡಿಸಿದ್ದರಲ್ಲಿ ಈ ಹುನ್ನಾರವೂ ಅಡಗಿದೆ ಅಂತ ತಿಳಿದು.. ಹೂಂಗುಟ್ಟಿ.. ಹೊರಟೆ...
ಮನೆ ಹತ್ರ ಇರೋ ಪಾರ್ಕ್ ಗೆ ಹೋದಾಗ ಹೊಸದೊಂದು ಪ್ರಪಂಚನೇ ನನ್ನ ಕಣ್ಣೆದುರಿಗೆ ಇತ್ತು... ಆಗತಾನೆ ಮೂಡ್ತಿರೋ ಸೂರ್ಯನ ಎಳೇ ಕಿರಣಗಳ ಮದ್ಯೆ.. ವಯೋಮಾನದ ಭೇದವಿಲ್ಲದ ಹಾಗೆ ಎಷ್ಟೋಂದು ಮಂದಿ ಪಾರ್ಕಲ್ಲಿ ವಾಕಿಂಗ್, ಜಾಗಿಂಗ್ ಮಾಡ್ತಾ ಇದ್ರೂ.. ಕೆಲವರು ಕೈ-ಕಾಲು ಆಡಿಸ್ತಾ ವಿಚಿತ್ರವಾಗಿ ನಡೀತಿದ್ರೂ, ನಡುವಯಸ್ಕರ ಗುಂಪೊಂದು ರಾಜಕೀಯ ವಿಶ್ಲೇಷಣೆಯಲ್ಲಿ ನಿರತವಾಗಿದ್ರೆ.. ಹೆಂಗಸರ ಗುಂಪು ನಗುತ್ತಾ.. ಹರಟುತ್ತಾ ಹೆಜ್ಜೆ ಹಾಕ್ತಾ ಇದ್ರು, ಕೆಲವರು ಈ ಪ್ರಪಂಚಕ್ಕೂ ,ತಮಗೂ ಸಂಬಂಧವೇ ಇಲ್ಲದವರಂತೆ ಒಬ್ಬಂಟಿಗಳಾಗಿ ಓಡ್ತಾ ಇದ್ರು.. ಹದಿಹರೆಯದ ಹುಡುಗರು, ಸುಕೋಮಲೆಯರಾದ ತರುಣಿಯರು ಕಿವಿಗೆ ಇಯರ್ ಪೋನ್ ಸಿಕ್ಕಿಸಿಕೊಂಡು ಓಡೋದನ್ನ ನೋಡೋದೆ ಒಂದು ಅದ್ಬುತ..ಪಕ್ಕದಲ್ಲೇ `ಜಿಂಕೆ ಮರಿ ಓಡ್ತಾ ಇದೆ ನೋಡ್ಲ ಮಗ' ಅನ್ನೋ ಹಾಡು ಕೇಳಿಸೋ ಹಾಗೆ ಒಬ್ಬರು ಮೊಬೈಲ್ನಲ್ಲಿ ಹಾಡು ಕೇಳಿಸಿಕೊಂಡು ನಡಿತಾ ಇದ್ರು...ಛೇ..ಇಷ್ಟು ದಿನ ಇಂತಹ ದೃಶ್ಯಗಳಿಂದ ನಾನು ವಂಚಿತನಾಗಿದ್ದನಲ್ಲಾ ಅಂತ ನನ್ನನ್ನ ನಾನೇ ಶಪಿಸಿಕೊಂಡೆ.. ಸರಿ ಈಗ ಓಡೋದೋ.. ನಡಿಯೋದೋ ಅಂತ ಯೋಚಿಸ್ದೆ.. ನಾನು ಓಡಿದ್ರೆ.. `ಆನೆ ಮರಿ ಓಡ್ತಾ ಇದೆ ನೋಡ್ಲಾ ಮಗ' ಅಂತ ಯಾರಾದ್ರೂ ಆಡಿಕೊಂಡ್ರೆ ಕಷ್ಟ ಅಂತ ನಡೆಯೋದಿಕ್ಕೆ ಶುರು ಮಾಡ್ದೆ.. ಅಷ್ಟರಲ್ಲಿ ನನ್ನ ಹಿಂದೆ ಬಂದ ಪರಿಚಿತರೊಬ್ಬರು..` ರೀ ವಾಕಿಂಗ್ ಅಂದ್ರೆ.. ಆರಾಮಾಗಿ ನಡೆಯೋದಲ್ಲ.. ಬ್ರಿಸ್ಕ್ ಆಗಿ ವಾಕ್ ಮಾಡಿ' ಅಂತ ಹೇಳಿ.. ನಾನು ಬಾಯ್ ತೆರೆಯೋ ಮುಂಚೆನೇ ಜೋರಾಗಿ ಕೈ ಬೀಸತಾ ಹೋರಟೇ ಹೋದ್ರು... ನಾನು ಅವರ ಹಾಗೆ ಕೈ ಬೀಸಿಕೊಂಡು ನಡೆಯೊದಿಕ್ಕೆ ಪ್ರಾರಂಭ ಮಾಡ್ದೆ.. ಎದುರು ಸಿಕ್ಕ ಅಜ್ಜಿಯೊಬ್ಬರು `ಅಲ್ಲಪ್ಪಾ.. ನೀನು ಆ ಮಗುಗೆ ಹಾಗಾ ಕಷ್ಟ ಕೊಡೋದು' ಅಂದಾಗ ನಾನು ಕಕ್ಕಾಬಿಕ್ಕಿ.. `ಇಲ್ಲ ಅಮ್ಮ ನನ್ನ ಮಗನಿಗೆ ಅಪರೂಪಕ್ಕೆ ಒಂದೆರಡು ಏಟು ಕೊಟ್ತೀನಿ ಅಷ್ಟೇ' ಅಂದೆ.. `ಅಯ್ಯೋ.. ನಾನು ಹೇಳಿದ್ದು ರಾಘವೇಂದ್ರ ಮಹಿಮೆ ಧಾರವಾಹಿಲಿ ನೀವು ಆ ಅಪ್ಪಣ್ಣನಿಗೆ ಹಾಗಾ ಕಷ್ಟ ಕೊಡೋದು 'ಅಂದಾಗ ಇವರು ಧಾರವಾಹಿಯ ನನ್ನ ಪಾತ್ರದ ಬಗ್ಗೆ ಕೇಳ್ತಾ ಇದ್ದಾರೆ ಅಂತ ಮನವರಿಕೆ ಆಗಿ `ಅಮ್ಮ ಅದು ಪಾತ್ರ... ನಾನಲ್ಲ.. ನಿರ್ಧೇಶಕರು ಹೇಳಿದ ಹಾಗೆ ನಾವು ಕೇಳಬೇಕು 'ಅಂತೆಲ್ಲಾ ಅವರಿಗೆ ವಿವರಣೆ ಕೊಟ್ರು.. `ಏನೋಪ್ಪ.. ನೀವು ಅಂಥಹ ಪಾತ್ರನೆಲ್ಲಾ ಮಾಡಬೇಡಿ, ನಮಗೆ ಇಷ್ಟವಾಗೊಲ್ಲ'ಅಂತ ಹೇಳಿ ಅವರು ಹೊರೆಟ್ರು... ನಾನು ಒಂದೆರಡು ಸುತ್ತು ಹೊಡೆದು.. ಅಲ್ಲೇ ಇದ್ದ ಬೆಂಚ್ ಮೇಲೆ ಕೂತುಕೊಂಡೆ.. ತಕ್ಷಣ ಹಾಲು ತಗೊಂಡು ಹೋಗಬೇಕಾದ್ದು ನೆನಪಾಗಿ.. ಎದ್ದು.. ಅಲ್ಲೇ ಮಾರಾಟ ಮಾಡ್ತಾ ಇದ್ದ ಹಾಲು ತಗೊಂಡು.. ಮನೆಗೆ ಹೊರಟೆ..
ಮನೆಗೆ ಹೋಗಿ.. ಸೋಫಾ ಮೇಲೆ ಕುಳಿತು ಸುಧಾರಿಸಿಕೊಳ್ಳುತ್ತಿದ್ದಾಗ.. ಹೆಂಡತಿ ` ಪಾಪ ತುಂಬಾ ಸುಸ್ತಾಗಿದ್ದೀರಾ.. ಇವತ್ತು ಕಾಫಿ ಬೇಡ ತಗೊಳ್ಳಿ.. ಬೂಷ್ಟ್' ಅಂತ ಲೋಟ ಕೈಲಿಟ್ಳು... ಜಾಗಿಂಗ್ ಹೋದ್ರೆ.. ಇಷ್ಟು ಮರ್ಯಾದೆ ಸಿಗುತ್ತೆ ಅಂತ ಗೊತ್ತಾಗಿ ಖುಷಿ ಪಟ್ಟೆ... ಆದ್ರೂ ಯಾಕೋ ಸ್ವಲ್ಪ ಕಾಲು ನೋವು... ನಾಳೆ ಒಂದಿನ ಜಾಗಿಂಗ್ ಗೆ ರಜಾ ಹಾಕಲಾ?.... ಏನಂತೀರಾ....?
ಡಯಟ್ಟು
--------

ಊಟ ಮಾಡುವಾಗ ನೆನಪಾಗದ 'ಡಯಟ್ಟು'
ಕನ್ನಡಿ ಮುಂದೆ ನಿಂತಾಗ ನೆನಪಾಗಿ..
ನಿರ್ಧರಿಸಿದೆ... ನಾ ಆಗ ಬೇಕು 'ಫಿಟ್ಟು'
'ಚಿಪ್ಸು' ಕಂಡಾಗ ಮರೆತೆನೆಲ್ಲಾ 'ಟಿಪ್ಸು'
ಮಾಡದಕ್ಕೆ 'ಡಯಟ್ಟು' ಆಯಿತೀಗ 'ಎಡವಟ್ಟು'
ಪ್ಯಾಂಟುಗಳೆಲ್ಲಾ 'ಫಿಟ್ಟು... ಫಿಟ್ಟು..ಫಿಟ್ಟು'

*****************************
ಆಲ್ 'ರೌಂಡರ್'
---------------

'ಆಲ್ ರೌಂಡರ್ '; 'ಭೂಮಿ ತೂಕದ' ಮನುಷ್ಯ
ಎಂದೆಲ್ಲಾ ಕರೆದಾಗ
ಮತ್ತಷ್ಟು ಉಬ್ಬಿಹೋದೆ.. ನಾ ... ಹಿಗ್ಗಿ..ಹಿಗ್ಗಿ...
ಕನ್ನಡಿ ಎದುರು ನಿಂತಾಗ
ಆಲ್ 'ರೌಂಡರ್ ' ; 'ಭೂಮಿ 'ತೂಕ' ದ ಅರಿವಾಗಿ
ಕುಗ್ಗಿಹೋದೆ... ನಾ... ತಗ್ಗಿ..ತಗ್ಗಿ...

******************************
ಆಕಾರವಿಲ್ಲದ ದೇಹ
-----------------

ನೋಡಿ ಆಕಾರವಿಲ್ಲದ ಈ ದೇಹ
ಯಾರೂ ಮಾಡಲಾರರು ಮೋಹ
ಆದರೇನು.. ನಗುತ, ನಗಿಸುತ...
ನಾ ಮಾಡುವೆ ಎಲ್ಲರ ಸಂ-ಮ್ಮೋಹ
ವಿರಹ
------
ವಿರಹಾಗ್ನಿ ಸುಡುತಿದೆ ಹೃದಯ
ಬೇಯುವ ಮುಂಚೆ ಬಳಿ ಬಾರೆ ಪ್ರೇಯಸಿ
ನೀ ನನ್ನ ಮನ ಕನ್ನಡಿ ಒಡೆದರೂ
ನೂರು ಚೂರುಗಳಲ್ಲಿ ಕಾಣುವುದು ನಿನ್ನದೇ ಪ್ರತಿಬಿಂಬ
ಹೃದಯವ ಬರಿದಾಗಿಸಿ... ಬದುಕನೆ ಒಣಗಿಸಿ
ಕಾಯಿಸಿ.. ಸತಾಯಿಸಿ.. ಕೊಲ್ಲದಿರು
ಪ್ರೀತಿ
-------
ಬಡವನಾದರೇನು ಪ್ರಿಯೆ
ಪ್ರೀತಿಯೇ ಶ್ರೀಮಂತಿಕೆ ಅಲ್ಲವೇನು
ಹಂಸತೂಲಿಕ ತಲ್ಪ ಇಲ್ಲದಿದ್ದರೇನು
ನನ್ನ ತೋಳಿನ ಮೇಲೆ ಮಲಗಿಸಿ ಲಾಲಿ ಹಾಡುವೆನು
ಬೆಳ್ಳಿ-ಬಂಗಾರ ಕೊಡದಿದ್ದರೇನು
ಸಿಹಿ ಮುತ್ತಿನಲ್ಲಿ ನಿನ್ನ ಶೃಂಗರಿಸುವೆನು
ಪಟ್ಟೆ ಜರತಾರಿ ರೇಷ್ಮೆ ಸೀರೆ ಕೊಡಲಾರೆ ನಾನು
ಕಾಮನಬಿಲ್ಲನೆ ತಂದುಡಿಸುವೆನು
ಬದುಕಿನ ಪಾಠ
-------------
ಬದುಕಿನ ಶಾಲೆಯಲ್ಲಿ ನಿತ್ಯವೂ ಪಾಠವೇ
ನಡೆಯುವ ಪ್ರತಿ ಘಟನೆಯೂ ಗುರುವೇ
ಕಲಿಯುವ ವಿದ್ಯೆಗೆಲ್ಲಾ ನಮ್ಮ ಅರಿವೇ ಗುರು
ಅನುಭವಗಳೇ ಪಠ್ಯ ಪುಸ್ತಕಗಳು
ಎಡವಿದ ಕಾಲಿಗೆ.. ನೋವೇ ಬುದ್ಧಿ
ಶಾಲೆಯಲ್ಲಿ ಕಲಿತು ಪಾಠ... ಎದುರಿಸುತ್ತೇವೆ ಪರೀಕ್ಷೆ
ಆದರಿಲ್ಲಿ ಎದುರಿಸಿ ಪರೀಕ್ಷೆ... ಕಲಿಯುತ್ತೇವೆ ಪಾಠ
ತಿದ್ದಿ ತಪ್ಪ ನಡೆದವನೇ ಜಾಣ.. ಇಲ್ಲದಿರೆ ಅವ ಮೇಲೇಳದ ಕೋಣ
ಇಂದಿನ ದಿನಗಳಲ್ಲಿ ಮದುವೆಯಾಗಿ ವರುಷ ತುಂಬುವ ಮೊದಲೇ ವೈವಾಹಿಕ ಸಂಬಂಧಗಳು ಅರ್ಥ ಕಳೆದುಕೊಂಡು.. ಚಿಕ್ಕ-ಪುಟ್ಟ ವಿಷಯಗಳಿಗೆಲ್ಲಾ ವಿಚ್ಛೇದನ ಹಂತಕ್ಕೆ ತಲುಪುತ್ತಿವೆ.. ಒಟ್ಟು ಕುಟುಂಬಗಳನ್ನು ಇಷ್ಟ ಪಡದ ಹೆಣ್ಣುಮಕ್ಕಳು ಅದೇ ಕಾರಣಕ್ಕೆ ತಮ್ಮ ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ... ಅಂತಹ ಪರಿಸ್ಥಿತಿಯ ಗಂಡಿನ ಮಾನಸಿಕ ತೊಳಲಾಟವೇ ಈ ಕವನ
************************************************************
ವಿಚ್ಛೇದನ
---------
ಮರೆತೆಯಾ ಸಪ್ತಪದಿ ನಾಗೋಲಿ
ನೆನಪಿಲ್ಲವೇ ಬಂ

ಧು-ಬಾಂಧವರ ಹಿತನುಡಿ-ಹಾರೈಕೆ
ಸಡಿಲಗೊಂಡಿತೆ ನಾ ಕಟ್ಟಿದ ಕರೀಮಣಿ
ಅರ್ಥೇಚ-ಧರ್ಮೇಚ-ಕಾಮೇಚ ನಾತಿಚರಾಮಿ
ಎಂದು ಹೇಳಿದಾ ಆ ವಚನಕ್ಕೇನು ಬೆಲೆ
ನಿನ್ನ ಬಿಟ್ಟಿಲಾರೆನೆಂದು ಹೇಳಿದ ಮಾತುಗಳೆಲ್ಲಾ ನಾಟಕವೇನು
ಮೈಗಂಟಿದಾ ಅರಿಷಿಣ ಇನ್ನೂ ಒಣಗಿಲ್ಲ
ನಿನ್ನ ಕೈಯಲ್ಲಿರುವ ಮದರಂಗಿ ಅಳಿಸಿಲ್ಲ
ನೀ ಎನ್ನ ಪ್ರೀತಿಸಿದ್ದು ಸುಳ್ಳೇನು
ಸಂಸಾರ ಇಷ್ಟು ಬೇಗ ನಿಸ್ಸಾರವಾಯಿತೇನು
ಭವಿಷ್ಯದ ಕನಸುಗಳ ಸುಲಭದಲ್ಲಿ ಅಳಿಸಿಬಿಟ್ಟೆಯೇನು
ನಾ ಮಾಡಿದ ತಪ್ಪೇನು.. ನಿನ್ನ ಒಪ್ಪೇನು
ನನ್ನ ಅಪ್ಪ-ಅಮ್ಮ ನಿನ್ನ ಹೆತ್ತವರಂತೆ ಅಲ್ಲವೇನು
ನಿನಗಾಗಿ ಅವರ ತೊರೆಯಲಾರೆ .. ನಿನ್ನನ್ನು ಬಿಡಲಾರೆ
ಕೋರ್ಟು ನೀಡುವ ವಿಚ್ಛೇದನ ನನ್ನ ಮರೆಸಬಲ್ಲದೇನು
ಪ್ರೇಮದ ಕಾಣಿಕೆ
---------------
ತವರೂರ ಹಸಿರಾಗಿ
ಹೊಕ್ಕ ಮನೆಯ ಬೆಳಕಾಗಿ
ನನ್ನ ಬಾಳಿನ ಸಂತಸದ ಚಿಲುಮೆಯಾಗಿ
ನನ್ನ ಹೆಗಲಿಗೆ ಹೆಗಲಾಗಿ
ಜೀವನ ರಥದ ಜೋಡಿಯಾಗಿ
ನನ್ನ ಯಶಸ್ಸಿನ ಮೆಟ್ಟಿಲಾಗಿ
ನನ್ನ ಹೆತ್ತವರಿಗೂ ಮಗಳಾಗಿ
ಬಂದಿರುವ ಪ್ರೇಮ ಮೂರ್ತಿಗೆ
ನಾ ಏನ ನೀಡಬಲ್ಲೆ ಕಾಣಿಕೆ

ಸಿಹಿ ಮುತ್ತುಗಳಿಂದ ನಿನ್ನನ್ನಲಂಕರಿಸಿ
ಬಾಹು ಬಂಧನದ ಹಾರವ ಅರ್ಪಿಸಿ
ಆ ಗಂಗಾಧರನಂತೆ ನನ್ನ ತಲೆಯಮೇಲೇರಿಸಿ
ಪ್ರೇಮದ ಕಾಣಿಕೆಯಾಗಿ ಮಗನನ್ನು ಮಡಿಲಲ್ಲಿರಿಸಿ
ಮೆರಸಿದರೆ ಸಾಕೇ.. ಎನ್ನರಸಿ.. ಪ್ರೇಯಸಿ
ಬದುಕಿನ ಆಟ
------------
ಆಸೆಯ ಮರೀಚಿಕೆಯ ಹಿಂದೆ ಓಡಾಟ
ಅದಕ್ಕಾಗೆ ಹುಡುಕಾಟ
ಬಯಸಿದ್ದು ಸಿಗದ ಬಗ್ಗೆ ಗೊಣಗಾಟ
ಎಂದೂ ಕಲಿಯುವುದಿಲ್ಲ ಸರಿಯಾದ ಪಾಠ
ಎಲ್ಲರೊಂದಿಗೂ ಮುಸುಕಿನ ಗುದ್ದಾಟ
ಇದೇ ಈ ಬದುಕಿನ ಜಂಜಾಟ
ಮುಸ್ಸಂಜೆ
---------
ಗೋಧೂಳಿ ಸಮಯದಲಿ
ನೇಸರನು ಪಡುವಣದಲಿ ಪವಡಿಸಲು
ನಿಶೆಯು ಲಾಲಿ ಹಾಡಿದಳು
ಭೂದೇವಿ ಜಾಗವಿತ್ತಳು ತನ್ನುದರದಲಿ
ಬಂಜೆ
------
ಮಕ್ಕಳಿಲ್ಲವೆಂದು ಕೊರಗುತ್ತಿದ್ದ ಸಂತಾನಲಕ್ಷ್ಮಿ
ನೆರೆಯ ಸಾಕವ್ವನನ್ನು ಅವಳ ಆರು ಮಕ್ಕಳು
ವೃದ್ಧಾಶ್ರಮಕ್ಕೆ ಸೇರಿಸಿದಾಗ
ತನ್ನ ಬಂಜೆತನವೇ ಲೇಸೆಂದು ಕಣ್ಣೀರು ಹಾಕಿದಳು
ಸ್ನೇಹ
____________

ಜೀವನದ ಹೊಂಬೆಳಕು .. 'ಸ್ನೇಹ'
ಮಧುರ ಅನುಭೂತಿ .. 'ಸ್ನೇಹ'
ನಿಷ್ಕಲ್ಮಷ ಪ್ರೀತಿ .. 'ಸ್ನೇಹ'
ಸ್ವಾರ್ಥ, ಅಹಮಿಕೆಗಳ ಮೆಟ್ಟಿನಿಲ್ಲುವುದು .. 'ಸ್ನೇಹ'
ಬಂಧ, ಸಂಬಂಧಗಳ ಸಂಕೋಲೆ ಹರಿಯುವುದು .. 'ಸ್ನೇಹ'
ದೈವಕ್ಕೂ ಮೀರಿ, ಚಿರಾಯು.. ಚಿರನೂತನ.. ಚೈತನ್ಯದಾಯಿ.. 'ಸ್ನೇಹ'...ಸ್ನೇಹ..ಸ್ನೇಹ
ಸ್ನೇಹ
____

ಸಿರಿತನ-ಬಡತನ ಬೇಡದ ..'ಸ್ನೇಹ'
ಹಿರಿಯರು-ಕಿರಿಯರು ಎನ್ನದ...'ಸ್ನೇಹ'
ಲಿಂಗಬೇಧವ ತೋರದ...'ಸ್ನೇಹ'
ಜಾತಿ-ಧರ್ಮಗಳ ಗೋಡೆಕಟ್ಟದ...'ಸ್ನೇಹ'
ಕಷ್ಟಕೂ-ಸುಖಕೂ ಕೈಚಾಚುವ...'ಸ್ನೇಹ'
ಸುಖ-ದುಃಖಗಳ ಹಂಚುವ ..'ಸ್ನೇಹ'
ಗೆಳೆಯ
-------
ನಗುವಿನಲ್ಲಿ ನಗು ಬೆರೆಸಿದವನು
ದುಃಖದಲ್ಲಿ ಕಣ್ಣೀರು ಒರೆಸಿದವನು
ಕಷ್ಟದಲ್ಲಿ ಕೈ ಹಿಡಿದವವನು
ಭಾವನೆಗಳಿಗೆ ಸ್ಪಂದಿಸಿದವನು
ಭವಿಷ್ಯದ ನಿರ್ಧಾರಗಳಿಗೆ ಸಲಹೆ ಇತ್ತವನು
ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಿದವನು
ಜೊತೆಯಲ್ಲಿ ಉಂಡು ಆಡಿದವನು
ಮುನಿಸಿಕೊಂಡಾಗ ಸಂತೈಸಿದವನು
ಗೆದ್ದಾಗ ತಾನೇ ಗೆದ್ದಂತೆ ಸಂಭ್ರಮಿಸಿದವನು
ಕಣ್ಣು ಮುಚ್ಚುವವರೆಗೂ ಜೊತೆ ಇರುವೆನೆಂದು ಭಾಷೆ ಇತ್ತವನು
ಗೆಳೆಯ.. ಗೆಳೆಯ... ಗೆಳೆಯ
ರಾಜಕಾರಣಿ
___________
ದಿನಕೊಂದು ಮುಖವಾಡ
ಉಸರವಳ್ಳಿಯೂ ನಾಚುವುದು ನೋಡಿ ಇವರ ಕೈವಾಡ
ಕೋಟಿ ಸಂಪಾದಿಸಿದರೂ ಸಾಲದು ಇವರಿಗೆ ನೋಡ
ಭೂಮಿ ಅಗಿದು, ಅದಿರು ಬಗೆದು, ಕಡಿಯುತ್ತಾರೆ ಕಾಡ
ಅಣ್ಣಾ ಹಜಾರೆ
__________

ಭ್ರಷ್ಟಾಚಾರ ನಿರ್ಮೂಲನೆ ಮಾಡುವೆನೆಂದ... ಅಣ್ಣಾ
ಪ್ರಭಲ ಲೋಕಪಾಲ ಜಾರಿಯಾಗುವವರೆಗೂ ಬಿಡಲಾರೆಯೆಂದ... ಅಣ್ಣಾ
ಮೂರುಬಾರಿ ಉಪವಾಸ ಕೂತು ಸರ್ಕಾರ ನಡುಗಿಸಿದೆಯಲ್ಲ.... ಅಣ್ಣಾ
ದೇಶ ಜನರ ನರನಾಡಿಗಳಲ್ಲಿ ಹುರುಪು ತುಂಬಿದೆ... ಅಣ್ಣಾ
ಭವ್ಯ ಭಾರತದ ಕನಸು ಕಾಣುವಂತೆ ಮಾಡಿದೆಯಲ್ಲ... ಅಣ್ಣಾ
ತಂಡಕಟ್ಟಿ ,ಕೂಗುಹಾಕಿ, ಆಂದೋಲನಮಾಡಿ ,ಭ್ರಷ್ಟರಲ್ಲಿ ನಡುಕ ಹುಟ್ಟಿಸಿದೆ... ಅಣ್ಣಾ
ಪಕ್ಷಕಟ್ಟಿ, ಓಟುಕೇಳಿ, ಅಧಿಕಾರ ಹಿಡಿಯಲು ಸಿದ್ಧನಾದೆ... ಅಣ್ಣಾ
ರಾಜಕೀಯ ಕೊಳಕು ಮೆತ್ತಿಕೊಳ್ಳದಂತೆ ಇರಲು ಸಾಧ್ಯವೇ... ಅಣ್ಣಾ
ಆದರೀಗ ಎಲ್ಲಾ ಮರೆತು ತಣ್ಣಗಾದೆ ...ಅಣ್ಣಾ
ಈ ದೇಶದ ದೌರ್ಭಾಗ್ಯಕೆ ಮರುಗುವಂತೆ ನಿರಾಶೆ ತುಂಬಿದೆ... ಅಣ್ಣಾ
ಒಬ್ಬ ಅಣ್ಣನೇನು.. ಸಾವಿರ ಅಣ್ಣಂದಿರಿಂದಲೂ ಬದಲಾಯಿಸಲಾಗದು ಈ ದೇಶದ ಬಣ್ಣ
ಗೆಳತಿ
------
ಕೈಯಲ್ಲಿ ಕೈ ಇಟ್ಟು
ಜೊತೆಗಿರುವೆನೆಂದು ಭಾಷೆಯಿತ್ತು
ಮನಕ್ಕೆ ಕನವ ಕೊರೆದು
ನೂರಾರು ಭಾವಗಳ ಬೆಸುಗೆ ಇತ್ತು
ಮೂರು ಗಂಟು ಹಾಕುವ ಮುನ್ನ
ಕಣ್ಣರೆಯಾದ ಜೀವವೇ... ಎತ್ತ ಹೋದೆ

ಹೋದವಳು ಬಾರದಿರಳೇ
ಕಾದಿರುವೆ.. ಕನವರಿಸಿ.
ಇಂದಲ್ಲ ನಾಳೆ ಬಂದು
ಮನದಲ್ಲಿ ಕೂತು
ರಂಗಾದ ರಂಗವಲ್ಲಿ ಬಿಡಿಸಿ
ಮನಕೆ ಸಂತಸ ತರುವಳೆಂದು
ದ್ವಂಧ್ವ
--------
ಮನದ ಹೋಯ್ದಾಟ
ಆಯ್ಕೆಯ ತಾಕಲಾಟ
ಬಯಸಿದ್ದು ಸಿಗದೇ ಸಿಕ್ಕಿದ್ದು ಬಯಸದೇ ತೊಳಲಾಟ
ಒಂದನಷ್ಟೇ ಪಡೆಯುವ ಪರಿಪಾಟ
ಕೊನೆವರೆಗೂ ಇದುವೇ ಜೀವನ ಜಂಜಾಟ
ಸ್ವಾತಂತ್ಯೋತ್ಸವ
-------------------
ನೆನೆಯಿರಿ ಎಲ್ಲರೂ ಹುತಾತ್ಮರ ಬಲಿದಾನ
ನಿತ್ಯವೂ ನಡೆದಿದೆ ಯೋಧನ ಕದನ
ಮಾತೃಭೂಮಿಯ ರಕ್ಷಿಪ ಅವನಿಗೆ ನಮನ
ಕಾಪಾಡಿರಿ ಎಲ್ಲರೂ ದೇಶದ ಮಾನ

ಭ್ರಷ್ಟತೆ- ಜಾತಿಯತೆ ದೂರವಿಡೋಣ
ಪ್ರಭಲ ಲೋಕಪಾಲ ಜಾರಿತರೋಣ
ಸಿಗುವಂತಾಗಲಿ ಎಲ್ಲರಿಗೆ ಶಿಕ್ಷಣ
ಬೀಳಲಿ ಸ್ವೇಚ್ಚಾಚ್ಚಾರಕೆ ಕಡಿವಾಣ
ಆಸೆ
----
ಆಸೆಗಳು..... ನೂರಾರು
ಕೈಗೂಡವು ......ಆರೂ
ಕನಸು ಕಾಣುವುದ ಬಿಟ್ಟಿಲ್ಲ
ನನಸಾಗಬೇಕೆಂದೆನೂ ಇಲ್ಲ
ಚಿತ್ತ ಹುಚ್ಚು ಕುದುರೆಯಂತೆ
ಓಡಿದರೆ ತಪ್ಪೇನಂತೆ
ಕಲ್ಪನೆ-ವಾಸ್ತವಗಳ ನಡುವೆ ಈ ಬದುಕು
ಸುಖ-ದುಃಖಗಳ ಸಂತೆಯಲ್ಲಿ ಎಲ್ಲರಿಗೂ ಸುಖವೇ ಬೇಕು
ಜ್ಞಾನ
------
ಅರಿವಿನ ಬುತ್ತಿಯಲಿ
ಅನುಭವದ ಗಂಟಿನಲಿ
ಕಾವ್ಯಗಳ ಭಂಡಾರದ ಜೀಲದಲಿ
ಇತಿಹಾಸದ ಪುಟಗಳಲಿ
ಸರ್ವಙ್ಞನ ವಚನಗಳಲಿ
ಗಾದೆಗಳ ತಿರುಳಿನಲಿ
ವೇದಗಳ ಸಾರದಲಿ
ಹಿರಿಯರ ಮಾತಿನಲಿ
ತುಂಬಿರುವ ಸವಿಜೇನು
ಕನಸು
-------
ಸಕ್ಕರೆಯ ನಿದ್ದೆಯಲಿ
ಬಣ್ಣದ ಕನಸಿನಲಿ
ಅಕ್ಕರೆಯ ನನ್ನರಸಿ
ಎನ್ನಪ್ಪಿ ಮುದ್ದಿಸಿ
ಲಾಲಿ ಹಾಡಿದಳು
ಸಿಹಿಮುತ್ತೊಂದ ನೀಡೆನಲು
ನಾಚಿ ಕೊಟ್ಟಳು ಕೆನ್ನೆಗೆ
ಬೆಳಗಾಗೆ ನಾನೆದ್ದು ಕನವರಿಸಿ ನೋಡಲು
ಕೆಂಪಾಗಾಗಿತ್ತು ಕೆನ್ನೆ ಸೊಳ್ಳೆ ಕಡಿತಕೆ
ಚಿಂತೆ
-------
ಬಿಡಲೊಲ್ಲವು ಚಿಂತೆಗಳು
ಒಂದರ ಹಿಂದೆ ಒಂದರಂತೆ ಸಾಲಾಗಿ ಬಂದು
ಮುಖದ ಮಂದಹಾಸವ ಕಳೆದು
ಮನದ ಉಲ್ಲಾಸವ ಹೊಸಕಿ
ಮನಸ್ಸಿನ ಮೂಲೆಯಲ್ಲಿ ಕುಳಿತು ಕೊರೆದು
ಚಿತ್ತ ಸ್ವಾಸ್ಥ್ಯವ ಕದಡಿ
ಅಳಿದುಳಿದ ಆಯಸ್ಸನ್ನು ಕಳೆಯಲೆಂದೆ ಬಂದಿಹವು
ನನ್ನ ಚಿತೆಯೊಂದಿಗೇ ಬೂದಿಯಾಗಬೇಕೆಂಬ ಛಲ ಹೊತ್ತಿಹವು
ಮೊದಲ ಪ್ರೀತಿ
----------------
ನಿನ್ನ ನೋಡಲು ಕಣ್ಣರಳಿಸಿ ಕಾಯುತ್ತಿದ್ದೆ
ಗೆಜ್ಜೆಯ ಇನಿದನಿಗೆ ಮೈಯಲ್ಲಾ ಕಿವಿಯಾಗುತ್ತಿದ್ದೆ
ನಿನಗಾಗಿ ನಾ ಓಡಿಬರುತ್ತಿದ್ದೆ
ನಿನ್ನ ಮುಗುಳ್ನಗೆಗೆ ಮನಸೋತಿದ್ದೆ
ಭಯದಲ್ಲೇ ನಿನ್ನ ಮಾತಾಡಿಸಿದ್ದೆ
ಅದು ಪ್ರೀತಿಯೋ.. ಆಕರ್ಷಣೆಯೋ ತಿಳಿಯದಾಗಿದ್ದೆ
ನನ್ನ ಹೃದಯದ ಬಾಗಿಲ ನಿನಗಾಗಿ ತೆರದಿದ್ದೆ
ನಮ್ಮ ಪುಟ್ಟ ಸಂಸಾರದ ಬಣ್ಣದ ಕನಸು ಕಂಡಿದ್ದೆ
ನಿನ್ನ ಕೈಹಿಡಿದು ನಲಿದಾಡಿದ್ದೆ
ಪ್ರೀತಿಸಿದೆ..... ನಿನ್ನ
ಮೀಸೆಮೂಡದ ಮುನ್ನ
ಅದರ ಫಲವಾಗಿ ಕಳೆದುಕೊಂಡೆ ನಿನ್ನ
ಮದುವೆಯಾಗುವಾ ಮುನ್ನ
ಭಯ
------
ನನ್ನ ನೆರಳೇ ನನ್ನ ಕಾಡಿತ್ತು
ಹೋದಲ್ಲಿ... ಬಂದಲ್ಲಿ ....ಹಿಂದಿಂದೆ ಬಂದಿತ್ತು
ಕುಳಿತಲ್ಲಿ ಕುಳಿತು.. ನಿಂತಲ್ಲಿ ನಿಂತು.. ನನ್ನನ್ನೇ ನೋಡಿತ್ತು
ರಾತ್ರಿ ದೀಪವಾರಿಸುವ ಮುನ್ನವೂ ನನ್ನ ಬಳಿಯೇ ಇತ್ತು
ಭಯದಲ್ಲಿ ದೀಪವಾರಿಸಿ.. ನಾ ಮಲಗಿದಾಗ ಎತ್ತ ಹೋಗಿತ್ತು
ಮತ್ತೆ ಬೆಳಗಿನ ಸೂರ್ಯೋದಕೆ ಶುಭಮುಂಜಾನೆ ಹೇಳಲೆಂದೇ ನನ್ನ ಪಕ್ಕ ಬಂದಿತ್ತು
ಬಿಟ್ಟರೂ ಬಿಡದ ಸಂಗಾತಿ ಈ ನೆರಳು.. ಕೊನೆವರೆಗೂ ಜೊತೆಯಿರುವುದು ಖಾತ್ರಿಯಾಗಿತ್ತು
ನಗು
-----
ಇರಬೇಕು ಮುಖದಲ್ಲಿ.. ನಗು
ಮುಗ್ದ ಮನಸಿನ ಮಗುವಿನ... ನಗು
ನೋವುಗಳನ್ನು ಮರೆಸುವ.... ನಗು
ಅಂದವ ಹೆಚ್ಚಿಸುವ..... ನಗು
ರೋಗಗಳ ದೂರಮಾಡುವ.... ನಗು
ಸ್ನೇಹಿತರ ಹೆಚ್ಚಿಸುವ.... ನಗು
ಆತ್ಮೀಯರ ಬರಸೆಳೆಯುವ.... ನಗು
ಆತ್ಮವಿಶ್ವಾಸವ ಹೆಚ್ಚಿಸುವ... ನಗು

ಮನದಲಿ ಧೈರ್ಯ ತುಂಬುವ ...ನಗು
ಸೋಲ ಮರೆಸಿ ಗೆಲುವು ತರುವ ..ನಗು
ನಗು... ನಗು.... ನೀ... ನಗು...
:) :) :) :) :) :) :) :) :) :) :) :) :) :) :) :)
ವಾಸ್ತವ
--------
ಕೈಯ ಮೇಲೆ ಹಾಕಿದ ಗೋರಂಟಿ
ಅಳಿಸಬಲ್ಲದೇ ಹಸ್ತ ರೇಖೆಯ
ಜಾತಕ ನೋಡುವ ಜ್ಯೋತಿಷಿ
ಹೆಚ್ಚಿಸಬಲ್ಲನೇ ಇರುವ ಆಯುಷ್ಯವ
ಸುರಿಸಿದ ಕಣ್ಣೀರು
ಮರೆಸಬಲ್ಲದೇ ಮನದ ನೋವ
ರಾತ್ರಿ ಕಂಡ ಸುಂದರ ಕನಸುಗಳೆಲ್ಲಾ
ನನಸಾಗಬಲ್ಲವೇ ಹಗಲಲ್ಲಿ
ಭ್ರಮೆಯಲ್ಲ ಈ ಬದುಕು
ವಾಸ್ತವದ ಹೂರಣ
ಕವನ
-----
ಅಕ್ಷರಗಳ ಜಾತ್ರೆಯಲ್ಲಿ
ಭಾವನೆಗಳ ಮೇಳದಲ್ಲಿ
ವಿಚಾರಗಳ ಸಂತೆಯಲ್ಲಿ
ಅನುಭವಗಳ ಮೂಟೆಯಲ್ಲಿ
ಪ್ರೀತಿಯ ಸಿಂಚನದಲ್ಲಿ
ಅರಳಿದ ಹೂವು
ಪೂಜೆ
-----
ಗುಡಿಯ ಬಾಗಿಲಲ್ಲಿ ಹಸಿದು ಕೈಚಾಚಿದ ಬಿಕ್ಷುಕಿಯ ಗದರಿ
ಗರ್ಭಗುಡಿಯಲಿ ದೇವನಿಗೆ ಪಂಚಾಮೃತ ಅಭಿಷೇಕವನೆ ಮಾಡಿ
ಫಲ-ಪುಷ್ಟ ಭಕ್ಷ-ಭೋಜ್ಯಗಳ ನೈವೇದ್ಯವನ್ನು ತಂದಿರಿಸಿ
ಶಂಖ-ಗಂಟೆ-ಜಾಗಟೆಗಳನ್ನು ಬಡಿದು
ತುಪ್ಪದಾರತಿ ಬೆಳಗಿದ ಜನರ ಭಕ್ತಿಗೆ
ಬೇಸರಿಸಿ ದೇವರು ಕಲ್ಲಾಗಿ ನಿಂತ
ಜೀವನ
------
ಸಾಗಿದೆ ಪಯಣ
ಕನಸಿನ ಲೋಕಕೆ
ಆಸೆಯ ಕುದುರೆಯನ್ನೇರಿ
ದಾರಿಯು ತಿಳಿಯದು
ಕುದುರೆಯು ಕುರುಡು
ತಲುಪುವ ಛಲವೊಂದೇ
ಮುನ್ನುಗ್ಗುವೆ ಮುಂದೆ
ಜೊತೆಗಾತಿ
-----------
ಸ್ವಪ್ನಲೋಕದ ಸುಂದರಿ ನೀನು
ಕನಸಲಿ ಕಾಡಿದ ಕಣ್ಮಣಿ ನೀನು
ಮನಸಿಗೆ ಮುದವೇರಿಸಿದ ಮಾನಿನಿ ನೀನು
ಹೆಜ್ಜೆಗೆ ಹೆಜ್ಜೆಹಾಕಿದ ಹದಿಬದೆ ನೀನು
ಕಷ್ಟಕೆ ಸಲಹಿದ ಸಹಧರ್ಮಿಣಿ ನೀನು
ನಿನ್ನನ್ನು ಪಡೆದ ಪುಣ್ಯದ ಪತಿ ನಾನು
ಮುಖವಾಡ
----------
ಮನದ ನೋವ ಮರೆಸಲು ನಗುವಿನ 'ಮುಖವಾಡ'
ನಿಜವನು ಮರೆಮಾಚಲು ಸುಳ್ಳಿನ 'ಮುಖವಾಡ'
ಸುಳ್ಳನು ನಿಜಮಾಡಲು ಅಳುವಿನ 'ಮುಖವಾಡ'
ಆಸೆಯ ತೀರಿಸಿಕೊಳ್ಳಲು ಪ್ರೀತಿಯ 'ಮುಖವಾಡ'
ಧೌರ್ಜನ್ಯ ಎಸೆಗಲು ರಕ್ಷಣೆಯ 'ಮುಖವಾಡ'
ದೇವರ ಮೇಲಿನ ಭಯಕೆ ಭಕ್ತಿಯ 'ಮುಖವಾಡ'
ಭಯೋತ್ಪಾದನೆಗೆ ಧರ್ಮದ 'ಮುಖವಾಡ'
ಸೀಟು-ಓಟಿಗಾಗಿ ಭರವಸೆ-ಆಶ್ವಾಸನೆಗಳ 'ಮುಖವಾಡ'
ನೈಜತೆ ಇಲ್ಲದ ಈ ಜಗತ್ತು 'ಮುಖವಾಡ' ಗಳ ಸಂತೆ
ಪ್ರೀತಿ
♥♥♥
ಪ್ರೀತಿ ಎಂಬುದು ಮನಸ್ಸಿನ ಗುಟ್ಟು
ಹೃದಯವೇ ಇದರ ನೆಲೆಗಟ್ಟು
ಗೊತ್ತೇ ಆಗದು ಇದರ ಹುಟ್ಟು
ಬಿಡಿಸಿಕೊಳ್ಳಲಾಗದು ಇದರ ಪಟ್ಟು
ಇದು ಎಲ್ಲೆಯಿಲ್ಲದ ಕಟ್ಟು
♥♥♥♥♥♥♥♥♥♥♥♥♥♥♥♥♥♥♥♥♥
ಬದುಕು
--------
ಜೀವನ ಯಾಂತ್ರೀಕೃತ ದೋಣಿ
ನಡೆಸುವ ಹುಟ್ಟಿಲ್ಲ.. ಗುರಿ ಗೊತ್ತಿಲ್ಲ
ಸಾಗಿದೆ ಪಯಣ.. ತೀರ ತಲುಪುವ ಆಸೆಯಲ್ಲಿ
ಹೆದರಿಸುವ ಮೊಸಳೆ.. ತಿಮಿಂಗಿಲಗಳು
ಈಜಿ ದಡಸೇರುವ ಬಯಕೆ..
ದೋಣಿಯಿಂದ ಹಾರುವ ಧೈರ್ಯವಿಲ್ಲ
ಅಲ್ಲೇ ಇರದೇ ಬೇರೆ ವಿಧಿಯಿಲ್ಲ..
ನಿರುದ್ಯೋಗ ಒಂದು ಸಮಸ್ಯೆಯೇ?
_____________________
' ಉದ್ಯೋಗಂ.. ಪುರುಷ ಲಕ್ಷಣಂ' ಎಂಬ ನುಡಿ ಹಳೆಯದಾದರೂ .. ಪ್ರಸ್ತುತವಾದದ್ದು.. ಕೇವಲ ಪುರುಷರಿಗಷ್ಟೇ ಅಲ್ಲ ಮಹಿಳೆಯರಿಗೂ ಇಂದು ಉದ್ಯೋಗ ಅವಶ್ಯಕ... ನಮ್ಮ ದೇಶದಲ್ಲಿ ಹಲವಾರು ಸಮಸ್ಯೆಗಳಿದ್ದು ಅವುಗಳಲ್ಲಿ ನಿರುದ್ಯೋಗವೂ ಒಂದು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.. ಆದರೆ ನಿಜವಾಗಿಯೂ ಈ ಸಮಸ್ಯೆಗೆ ಕಾರಣವನ್ನು ಹುಡುಕಿದರೆ.. ಇದು ನಮ್ಮ ಯುವಕರ ಸೋಮಾರಿತನವೆಂದೇ ನನ್ನ ಅನಿಸಿಕೆ.. ಕೆಲವರಿಗೆ ಸರ್ಕಾರಿ ಉದ್ಯೋಗದ ಭೂತ ಹಿಡಿದಿರುತ್ತದೆ

... ಸರ್ಕಾರಿ ಕೆಲಸವೊಂದನ್ನು ಬಿಟ್ಟು ಉಳಿದೆಲ್ಲವೂ ಕೆಲಸಗಳೇ ಅಲ್ಲ ಎಂಬ ನಿರ್ಧಾರಕ್ಕೆ ಬಂದಿರುತ್ತಾರೆ. ಇಂದಿನ ದಿನಗಳಲ್ಲಿ ನಮ್ಮ ಉದ್ಯೋಗಕ್ಕೂ.. ನಾವು ಪಡೆದ ವಿದ್ಯಾಭ್ಯಾಸಕ್ಕೆ ಸಂಬಂಧವೇ ಇಲ್ಲದಿರುವುದು ವಿಪರ್ಯಾಸವಾದರೂ ಸತ್ಯ.. ವಿದ್ಯೆ ಕೇವಲ ನಮ್ಮ ಬುದ್ಧಿ ವಿಕಸನಕ್ಕಾಗಿಯೇ ಹೊರತು .. ಉದ್ಯೋಗಪಡೆಯುವ ಸಾಧನವಲ್ಲ. ಕೆಲಸವಿಲ್ಲವೆಂದು ಆಲಸಿಗಳಾಗಿ ಕುಳಿತುಕೊಳ್ಳುವುದು ಯುವಕರಿಗೆ ಶೋಭೆತರುವುದಿಲ್ಲ.. ಜೊತೆಗೆ ಅವರ ತಂದೆ-ತಾಯಿಯರಿಗೆ ಹೆಚ್ಚಿನ ಹೊರೆಯಾಗಿ.. ಹಾಕುವ ಊಟಕ್ಕೆ ದಂಡವಾಗುತ್ತಾರೆ.ಸಮಾಜದ ದೃಷ್ಟಿಯಲ್ಲಿ ಇವರು ದಂಡಪಿಂಡಗಳು. ಸ್ವಂತ ಉದ್ಯೋಗದತ್ತ ಇವರ ಗಮನ ಹರಿಯುವುದಿಲ್ಲ. ಬಂಡವಾಳ ಇಲ್ಲವೆಂಬ ಸಬೂಬು ಸಾಮಾನ್ಯ.. ಬಂಡವಾಳ ತೊಡಗಿಸದೇ ಸ್ವ-ಉದ್ಯೋಗ ಮಾಡಲು ಸಾಧ್ಯವೇ ಇಲ್ಲವೇ? ಕೃಷಿ ಇಂದಿನ ಯುವಪೀಳಿಗೆಗೆ ಬೇಡವಾದ ಕಾಯಕ.. ಪೇಪರ್ ಅಥವಾ ಹಾಲಿನ ವಿತರಣೆ ಮಾಡುವುದೋ, ಮನೆಪಾಠ ಮಾಡುವುದೋ ಇತ್ಯಾದಿ ಇವರಿಗೆ ಅವಮಾನವಾಗುವ ಕಾಯಕಗಳು .. ಮನಸ್ಸಿದ್ದರೆ ಮಾರ್ಗ ಎನ್ನುವುದು ಇವರಿಗೆ ಏಕೆ ತೋಚುವುದಿಲ್ಲ.. ಉದ್ಯೋಗದಲ್ಲಿ ಮೇಲು -ಕೀಳೆಂಬ ಬೇಧವೆಣಿಸದೇ.. ಯಾವುದೋ ಒಂದು ಕೆಲಸ ಮಾಡುತ್ತಾ ಸಂಪಾದಿಸಿ.. ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬೇಕು.. ಇಂದು ಕೈಕೆಸರಾದರೆ.. ನಾಳೆ ಬಾಯಿ ಮೊಸರಾಗಲು ಸಾಧ್ಯ. ಆದ್ದರಿಂದ ನಿರುದ್ಯೋಗವನ್ನು ಸಮಸ್ಯೆ ಎಂದು ಭಾವಿಸುವುದೇ ತಪ್ಪೆಂದು ನನ್ನ ಅನಿಸಿಕೆ.. ನಿಮ್ಮ ಅಭಿಪ್ರಾಯವೇನು?
ಬಣ್ಣದ ಬದುಕು
---------------
'ಸಾರ್... ನಿನ್ನೆ ನಿಮ್ಮನ್ನ --------------ಆ ಧಾರವಾಹಿಯಲ್ಲಿ ನೋಡಿದೆ.. ನಿಮ್ಮ acting ನನಗೆ.. ನಮ್ಮ ಮನೆಯವರಿಗೆ ತುಂಬಾ ಇಷ್ಟ' ಹೀಗೆ ದಾರಿಯಲ್ಲಿ ಸಿಕ್ಕವರೊಬ್ಬರು ಹೇಳಿದಾಗ.. ಅದೆಷ್ಟು ಸಂತೋಷ.. ಈ ಬದುಕು ಸಾರ್ಥಕವಾದಂತಹ ರೋಮಾಂಚನ...ಆದರೆ ಮನೆಗೆ ಬಂದ ತಕ್ಷಣ ಪೋನ್ ರಿಂಗಾಗುತ್ತೆ.. ಸಾರ್... ಆ ಧಾರಾವಾಹಿ ನಿಲ್ಲಿಸ್ತಾ ಇದ್ದೀವಿ.. ನಿಮ್ಮ Dates ಯಾರಿಗೆ ಬೇಕಾದ್ರೂ ಕೊಡಿ... ಉಲ್ಲಾಸದಿಂದ ಹಾರಾಡುತ್ತಾ ಇದ್ದ ಮನಸ್ಸು .... ಮಂಕಾಗುತ್ತೆ.. ಮುಂದೆ? ಅ

ನ್ನೋ ಪ್ರಶ್ನೆ ಕಾಡುತ್ತೆ.
ಕಲಾದೇವಿ ಎಲ್ಲರನ್ನೂ ಕೈಬೀಸಿ ಕರೆಯುತ್ತಾಳೆ .. ಆದರೆ ಕೆಲವರನ್ನಷ್ಟೇ ಆಯ್ಕೆ ಮಾಡ್ಕೋತ್ತಾಳೆ.. ಆ ಕೆಲವರಲ್ಲಿ ನಾನು ಒಬ್ಬ ಅನ್ನೋದು ನಿಜಕ್ಕೂ ಹೆಮ್ಮೆಯ ವಿಚಾರ.. ಆದರೂ... ಈ ಕಲಾಜೀವನ.. ಬಣ್ಣದ ಬದುಕು ತುಂಬಾ ವಿಚಿತ್ರ.. ಅನಿಶ್ಚಿತತೆಯ ಸಂತೆ.. ದೂರದ ಬೆಟ್ಟ ನುಣ್ಣಗೆ ಅನ್ನೋ ಹಾಗೆ, ನೋಡೋರಿಗೆ ಕಲಾವಿದರ ಜೀವನ...ಬಣ್ಣ..ಬಣ್ಣವಾಗಿ ಕಾಣುತ್ತೆ.. ಅವರಿಗೆ ಸಿಗೋ ಪ್ರಚಾರ ಕಾಣುತ್ತೆ, ಸಂಪಾದನೆ ಬಗ್ಗೆ ಕೂತೂಹಲ ಮೂಡುತ್ತೆ.. ನಾವು ಅವರಂತೆ ಯಾಕೆ ಆಗಬಾರದು ಅನ್ನೋ ಆಸೆ ಗರಿಗೆದರತ್ತೆ.. ಆದರೆ ವಾಸ್ತವತೆ ಯಾರ ಕಣ್ಣಿಗೂ ಬೀಳಲ್ಲ..
LIFEಉ ಇಷ್ಟೇನೇ... ಬಂದದ್ದೆಲ್ಲಾ ಬರಲಿ... ಅಂತ ...ಮುನ್ನುಗ್ಗೋದು... ನಮ್ಮ ನಂಬರೂ ಬರುತ್ತೆ ಅನ್ನೋ ಆಶಾ ಭಾವನೆಯಲ್ಲಿ ಜೀವನ ಕಳೆಯೋದು ...
ನಗು.. ನಗುತಾ ನಲಿ...ನಲಿ ಏನೇ ಆಗಲಿ ಅನ್ನೋ ಹಾಡೋ ನೆನಪಾಗ್ತಾ ಇದೆ...:)
ಪ್ರೀತಿ
♥♥♥♥♥♥♥♥♥♥♥♥♥♥♥♥♥♥♥♥♥♥♥
ಪ್ರೀತಿ ಎಂಬುದು ಮನಸಿನಾ ಗುಟ್ಟು
ಹೃದಯವೇ ಅದರ ನೆಲೆಗಟ್ಟು
ಗೊತ್ತೇ ಆಗದು ಅದರ ಹುಟ್ಟು
ಇದರ ಬಳಿಯೇ ಇರುವುದು ಎಲ್ಲರ ಜುಟ್ಟು
♥♥♥♥♥♥♥♥♥♥♥♥♥♥♥♥♥♥♥♥♥♥♥
ಜೀವನ ....
--------
ನಡೆದು ಬಂದ ದಾರಿ ಹಲವಾರು
ಕೈಹಿಡಿದು ನಡೆಸಿದವರು ಹಲವರು
ಜೊತೆಯಾಗಿ ನಡೆದವರು ಕೆಲವರು
ನೆನಪುಗಳು ಸಾವಿರಾರು
ಕೊನೆಯಲ್ಲಿ ಬರರು ಯಾರು... .... ...
ದೀಪಾವಳಿ
----------
ದೇಹದ ಹಣತೆಗೆ
ಸಂತಸದ ಎಣ್ಣೆ ಹಾಕಿ
ನಗುವಿನ ಬತ್ತಿ ಇಟ್ಟು
ಸಂಭ್ರಮದ ದೀಪ ಉರಿಸೆ
ಬಾಳೆಲ್ಲ... ನಂದದ ದೀಪಾವಳಿ :)
ದೀಪ
------
ತಾ ಉರಿದು ಬೆಳಕ ನೀಡುವ.. ದೀಪ
ಕತ್ತಲೆಯ ಅಳಿದು ದಾರಿ ತೋರುವ.. ದೀಪ
ನಿರಾಕಾರ.. ನಿರ್ಗುಣನ ಪ್ರತೀಕ.. ದೀಪ
ಅಳಿಯದ ಬೆಳಕಾಗಿ.. ಕಳೆಯಲೆಲ್ಲರ ಪಾಪ
ಬದುಕಿನ ಲೆಕ್ಕಾಚಾರ
------------------
ಚಾಚಿರಿ ನೆರವಿನ ಹಸ್ತ ಅಶಕ್ತರತ್ತ
ಅದುವೇ ಪುಣ್ಯದ ಸಂಕಲನ +
ಕೂತುಂಡರೆ ಸಾಲದು ಕೊಪ್ಪರಿಗೆ ಹೊನ್ನು
ಮೈಬಗ್ಗಿಸಿ ದುಡಿಯದಿದ್ದರೇ ಬರಿದೇ ವ್ಯೆವಕಲನ -
ಮುಂದಡಿ ಇಡುವಲಿ ಯೋಚಿಸಬೇಕು
ಮನದಲಿ ಗುಣಗಳ ಗುಣಾಕಾರವ * ಮಾಡಲೇಬೇಕು
ತುಂಬು ಸಂಸಾರವ ಒಡೆಯಬೇಡಿ
ಆಸ್ತಿ ಭಾಗಾಚಾರದ ಭಾಗಾಕಾರಕ್ಕೆ :- ಮನಗೊಡಬೇಡಿ
ಬದುಕಿನ ಲೆಕ್ಕಾಚಾರವ ಮರೆಯದಿರಿ
ಸೋಲನು ನೀವು ಕಾಣದಿರಿ
ಚಿಹ್ನೆಗಳ ಜೀವನ
---------------
ಬದುಕಿನ ಹಾದಿ ಅಲ್ಪವಿರಾಮ,
ಅರ್ಥವೇ ಆಗದ ಈ ಬದುಕು ಪ್ರಶ್ನಾರ್ಥಕ?
ನಡೆಯುವ ಘಟನೆಗಳೆಲ್ಲಾ ಸೋಜಿಗವೇ !
ಬಾಳಿನ ಅಂತ್ಯಕೆ ಪೂರ್ಣವಿರಾಮ.
ಆಶಾವಾದಿ
----------
ಜೀವನವಿದು ನೋವು-ನಲಿವುಗಳ ಸಂತೆ
ಬುದ್ಧಿವಂತಿಕೆಯಲ್ಲಿ ನಲಿವುಗಳ ಕೊಳ್ಳಬೇಕಂತೆ

ತೆರೆದ ಮನದಲಿ ನೂಕಿ ನೋವುಗಳ
ಬರಸೆಳೆದು ಹರುಷವ
ಬಿಗಿದಪ್ಪಿ ಬಾಳ ಕನಸುಗಳ
ನಲಿಯಿರಿ ಜೀಕಿ ಜೀವನದುಯ್ಯಾಲೆಯ

ಬರುವ ಕಷ್ಟಗಳ ಸ್ಥಿರತೆಯಿಂದ ಎದುರಿಸಿ
ಅಲೆಯ ಹೊಡೆತಕೆ ಜಗ್ಗದ ಕೋಡುಗಲ್ಲಿನಂತೆ
ಸಮಸ್ಯೆಗಳಿಗೆ ಕುಗ್ಗದೆ ಮುಂದಡಿಯಿರಿಸಿ
ಸಮರಗೆಲ್ಲುವ ಸರದಾರನಂತೆ
ಬಣ್ಣದ ಕನಸು
-------------
ದೂರವಾದ ಗೆಳತಿಯ ನೆನಪಿನಲ್ಲಿ
ಕನಸುಗಳೆಲ್ಲಾ ಕಪ್ಪು-ಬಿಳುಪು
ಕಾಮನಬಿಲ್ಲಿನ ಬಣ್ಣಗಳ ಮರಳಿಸು ಗೆಳತಿ
ಕಣ್ಣೀರಿನ ಮಳೆ ನಿಂತಿದೆ
ರಂಗಿನ ಹೋಳಿ ಹಬ್ಬವ ಮನವೀಗ ಬಯಸಿದೆ
ದೇವ ಹೇಗೆ ಮೆಚ್ಚುವ?
---------------------
ಭಗವದ್ಗೀತೆ ನಿತ್ಯ ಪಠಿಸಿ
ಐದು ಬಾರಿ ನಮಾಜು ಮಾಡಿ ನಮಿಸಿ
ಮೂರು ಹೊತ್ತು ದೀಪ ಬೆಳಗಿ
ಮಾನವೀಯತೆ ಕಾಣದಾಗೆ
ದೇವ ಹೇಗೆ ಮೆಚ್ಚುವ?

ಜಾತಿ-ಧರ್ಮ ಹೆಸರ ಎತ್ತಿ
ಜನರ ಮಧ್ಯೆ ಧ್ವೇಷ ಬಿತ್ತಿ
ಮೇಲು-ಕೀಳು.. ಭೇದಮಾಡಿ
ದುರ್ಭಲರ ಹಿಂಸೆ ಮಾಡೆ
ದೇವ ಹೇಗೆ ಮೆಚ್ಚುವ?
ಸುರ್ಯೋದಯ
---------------
ಕಾಯಕ ಯೋಗಿ..ಆ ರವಿತೇಜನು
ನಿತ್ಯದಿ ಭೂವಿಯನು ಬೆಳಗುವನು
ಕತ್ತಲ ಕಳೆದು, ಬೆಳ್ಳಿಯ ಬೆಳಕನೆ ಹರಿಸುವನು
ಮೂಡಣದಿಂದ.. ಪಡುವಣ ದಿಕ್ಕಿಗೆ ಸಾಗುವನು
ಮುಸುಕಿದ ಮೋಡವ ಮೆಲ್ಲನೆ ಚದುರಿಸಿ ಮುನ್ನಡೆಯವನು
ಬೇಸರವಿಲ್ಲದೆ.. ಎಲ್ಲಿಯೂ ನಿಲ್ಲದೆ..ತನ್ನೆಯ ಕೆಲಸವ ಮಾಡುವನು
ಏನಾಗಲಿ.. ಮುಂದೆ ಸಾಗಲೇ ಬೇಕೆಂಬ ಕಿವಿಮಾತನು ಹೇಳುವನು
ನೆನಪುಗಳು ನೂರಾರು
--------------------
ಒಂದನೇ ತರಗತಿಯಲ್ಲಂದೂ ಒಕ್ಕೊರಲಿನಲಿ ಕಾಗುಣಿತ.. ಮಗ್ಗಿ ಹೇಳಿದ್ದು
ಗೋಲಿ, ಬುಗುರಿ, ಚಿನ್ನಿದಾಂಡು, ಮರಕೋತಿ, ಕಣ್ಣಾಮುಚ್ಚಾಲೆ,ಲಗೋರಿ ಆಡಿದ್ದು
ಸ್ವಾತಂತ್ರ್ಯ ದಿನಾಚರಣೆಯ ಮೆರವಣಿಯಲಿ ಭಾರತಾಂಬೆಗೆ ಜೈಕಾರ ಹಾಕಿದ್ದು
ಕಾವೇರಿ ಚಳವಳಿಯಲಿ ಭಾಗವಹಿಸಿ..ಅರ್ಥವಾಗದ ವಯಸ್ಸಿನಲ್ಲಿ ಧಿಕ್ಕಾರ ಕೂಗಿದ್ದು
ಗೆಳೆಯರೊಡಗೂಡಿ ಟೆಂಟ್ ಸಿನಿಮಾ ನೋಡಿ.. ಶಿಳ್ಳೆ ಹಾಕಿದ್ದು
ಶೈಕ್ಷಣಿಕ ಪ್ರವಾಸದಲ್ಲಿ ಬಸ್ಸಿನಲ್ಲಿ ಹಾಡಿಗೆ ಎಲ್ಲರೊಂದಿಗೆ ನಕ್ಕು ನಲಿದು,ಕುಣಿದಿದ್ದು

ಕಬ್ಬಿನ ಗದ್ದೆಯಲ್ಲಿ.. ಯಾರ ಅಪ್ಪಣೆಗೂ ಕಾಯದೆ ಕಬ್ಬು ಮುರಿದು.. ಹೆದರಿ ಓಡಿದ್ದು
ಕಾಲುವೆಯಲಿ ಈಜಾಡಿ..ಅಪ್ಪನ ಬೈಗುಳಕ್ಕೆ ಹೆದರಿ ಬೆವರಿದ್ದು
ಶಾಲಾ ವಾರ್ಷಿಕೋತ್ಸಕೆ ನಾಟಕದ ತಾಲೀಮು ನಡೆಸಿ.. ನಟಿಸಿ.. ಚಪ್ಪಾಳೆ ಗಿಟ್ಟಿಸಿದ್ದು.. ಬಾಲ್ಯದ ನೆನಪುಗಳು ನೂರಾರು,ಮನದಂಗಳದಿ ಹಚ್ಚ ಹಸಿರು..ಎಂದೂ ಮರೆಯಲಾಗದ್ದು.
ಕನ್ನಡ ಧ್ವಜ
-----------
ಹಳದಿ-ಕೆಂಪು ನಾಡಿನ ಹೆಮ್ಮೆಯದು
ಸಂಸ್ಕೃತಿಯ ಪ್ರತೀಕವದು
ನ್ಯಾಯಾಲಯ ಮಾನ್ಯ ಮಾಡದಿದ್ದರೇನು
ಸರ್ಕಾರಿ ಕಛೇರಿಗಳಲಿ ಹಾರದಿದ್ದರೇನು
ಇಂದಿನಿತು ಘನತೆ ಕುಂದಿಲ್ಲ
ಗೌರವದಿ ನಮಿಪಿವು ಎಲ್ಲಾ
ಕರುನಾಡ ಕೀರ್ತಿ ಪತಾಕೆಯದು
ಎಂದೆಂದಿಗೂ ಮರೆಯಾಗದು (ಮರೆಯಲಾಗದು)
ಮಾತೃಭಾಷೆ
------------
ಮಾತೃಭಾಷೆಯ ಮರೆತು
ಬೇರೆಲ್ಲ ಭಾಷೆಗಳ ಕಲಿತು
ಮೆರೆಯುತ್ತಿದ್ದ ಮೊಂಡ
ಎಡವಿ ಬಿದ್ದು. 'ಅಯ್ಯೋ ಅಮ್ಮ' ಎಂದೇ ಕೂಗಿಕೊಂಡ
ಅವಕಾಶ
--------
ಅವಕಾಶಗಳ ಹುಡುಕಾಟ ನಿರಂತರ
ಅದುವೆ ಸೋಲು-ಗೆಲುವಿನ ಅಂತರ
ಸಿಗುವವರೆಗೂ ಇರಲಿ..ಕಾತರ
ಅದಕ್ಕೆ ಬೇಕು ಅದೃಷ್ಟದ ಮಮಕಾರ
ಜೊತೆಗಿರಬೇಕು ಗೆಳೆಯರ ಸಹಕಾರ
ಸ್ವ-ಪ್ರಯತ್ನದಲ್ಲೇ ಧಕ್ಕಿಸಿಕೊಳ್ಳುವ ಛಲಗಾರ
ಆಗಲಿ ಎಲ್ಲರ ಕನಸುಗಳು ಸಾಕಾರ

- ಬಿ.ಎ.ಅಶೋಕ
ದೀಪಾವಳಿಯ ನೆನಪು
-----------------------
ಕಳೆದ ಮೂರುದಿನಗಳು ಘರ್ಜಿಸುತ್ತಾ..
ಬೆಳಕನ್ನು ಎರಚುತ್ತಿದ್ದ ರಸ್ತೆಗಳೆಲ್ಲಾ..
ಇಂದು ಸುಸ್ತಾಗಿ..
ಸಂಭ್ರಮದ ದೀಪಾವಳಿಯ ನೆನಪನ್ನು ಮೆಲುಕು ಹಾಕುತ್ತಾ..
ನಿಶ್ಯಬ್ಧವಾಗಿ ಮಲಗಿವೆ...
ನಗರಪ್ರದೇಶದ ಮಕ್ಕಳ ಧ್ವನಿಯಾಗಿ ಈ ಕವನ :-
____________________________________________
ಬಾಲ್ಯ
------
ಬೆನ್ನಿಗೆ ಭಾರದ ಸ್ಕೂಲ್ ಬ್ಯಾಗು
ಎಂದೂ ಮುಗಿಯದ ಹೋಂ ವರ್ಕು
ಸಂಜೆಯ ಆಟವ ಮರೆಸುವ ಟ್ಯೂಷನ್
ತಿಂಗಳಿಗೊಮ್ಮೆ ಬೆದರಿಸೋ ಟೆಸ್ಟು

ಜೊತೆಗೆ ಮಾಡ್ಬೇಕು ಪ್ರಾಜೆಕ್ಟು..
ಇಂತಹ ಬಾಲ್ಯ ಯಾಕೆ ಬೇಕು?

ಮರಕೋತಿ,ಗಿಲ್ಲಿದಾಂಡು,ಲಗೋರಿ ಆಡಿಲ್ಲ
ಕ್ರಿಕೆಟ್ ಬಿಟ್ಟರೆ ಬೇರೆ ಆಟ ಗೊತ್ತಿಲ್ಲ
ಅಜ್ಜಿಯ ಕಥೆಯ ಕೇಳಿಲ್ಲ
ಹಳ್ಳಿ ತಿಂಡಿಗಳ ಸವಿದಿಲ್ಲ
ಹೊಲಗದ್ದೆಗಳ ನೋಡಿಲ್ಲ
ಹೀಗೆಯೇ ಬಾಲ್ಯ ಮುಗಿಯುವುದಲ್ಲ...

- ಬಿ.ಎ.ಅಶೋಕ
ಗೆಲುವು
ತರುವ
ಅಹಂಕಾರ
ಅಳಿಯಲು
ಸೋಲು
ಎದುರಾಗಬೇಕೆ ?
- ಬಿ.ಎ.ಅಶೋಕ
ಸೋಲು-ಗೆಲುವು
---------------
ಸೋಲಿನ
ನೋವಿಗೆ
ಗೆಲುವೊಂದೇ
ಮದ್ದು....

ಗೆಲುವು
ತರುವ
ಅಹಂಕಾರದ

ರೋಗಕೆ
ಸೋಲೇ
ಮದ್ದು!!!

ಗೆದ್ದವ ಮುಂದೆ
ಸೋಲಲೇ
ಬೇಕು!

ಸೋತವ
ಗೆಲ್ಲಲು
ಛಲವಿರಬೇಕು!!!

-ಬಿ.ಎ.ಅಶೋಕ
ಬದುಕು
--------
ತಿರುಗಿ ನೋಡಿಯೂ
ಹಿಂತಿರುಗಲಾರದ ಹಾದಿ ಈ ಬದುಕು.
ಬಾಳಿನ ಪಯಣ
----------------
ಬಾಳೊಂದು ಪಯಣ
ಜೂತೆಯಲ್ಲಿ ಹೆಜ್ಜೆ ಹಾಕೋಣ
ಕಹಿ ನೆನಪುಗಳ ಮರೆಯೋಣ
ಸವಿ ನೆನಪುಗಳ ಹೊತ್ತು ನಡೆಯೋಣ
ನಿರೀಕ್ಷೆ
------
ನೀ ಬರುವ ದಾರಿಯನ್ನೇ
ಎವೆಯಿಕ್ಕದೇ ದಿಟ್ಟಿಸಿದ
ಕಣ್ಗಳು ಆಯಾಸಗೊಂಡು ಮುಚ್ಚಿದಾಗಲೂ
ಕನಸಿನಲ್ಲಿಯೂ ನಿನ್ನನ್ನೇ ಕಾಣಲು ಹಂಬಲಿಸಿದವು !

- ಬಿ.ಎ.ಅಶೋಕ

Tuesday, 11 December 2012

ಮನೋಭಿಲಾಷೆ
---------------
ನಿರಾಸೆಯ ಕಾರ್ಮೋಡವ ಚದುರಿಸಲು
ಬೀಸಲಿ ಭರವಸೆಯ ಗಾಳಿ
ಚಿಂತೆಯ ಮೋಡಗಳೆಲ್ಲಾ ಕರಗಿ ಹರಿಯಲಿ
ಸಂತಸದ ಹೂ ಮಳೆಯಾಗಿ
ಕನಸುಗಳೆಲ್ಲಾ ಕಾಮನಬಿಲ್ಲಾಗಿ
ನರ್ತಿಸಲಿ ಮನ.. ನಲಿವ ನವಿಲಾಗಿ.. :)

-ಬಿ.ಎ.ಅಶೋಕ